ಕಾಸರಗೋಡು: ಕೆಎಸ್ಸಾರ್ಟೀಸಿ ‘ಪ್ರಿಯದರ್ಶಿನಿ’ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಜಾರಿಯಾದ ಬಳಿಕ ಖಾಸಗಿ ಬಸ್ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ, ಉದ್ಯಮವನ್ನು ಸಂರಕ್ಷಿಸುವಂತೆ ಆಗ್ರಹಿಸಿ ಜುಲೈ 6ರಂದು ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಲಿವೆ.

ಕೇರಳ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್‌ನ ಕಾಸರಗೋಡು ಜಿಲ್ಲಾ ಘಟಕ ಹಾಗೂ ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮುಷ್ಕರದ ಅಂಗವಾಗಿ ಬೆಳಿಗ್ಗೆ 10 ಗಂಟೆಗೆ ಬಸ್ ಮಾಲೀಕರು ಮತ್ತು ಸಿಬ್ಬಂದಿ ಕಲೆಕ್ಟರೇಟ್‌ಗೆ ಮೆರವಣಿಗೆ ನಡೆಸಿ, ಬಳಿಕ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಿದ್ದಾರೆ.
ಮಹಿಳೆಯರು ಉಚಿತವಾಗಿ ಕೆಎಸ್ಸಾರ್ಟೀಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವುದರಿಂದ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರ ಪರಿಣಾಮ ದಿನನಿತ್ಯದ ಆದಾಯ ಅರ್ಧಕ್ಕಿಂತಲೂ ಹೆಚ್ಚು ಕುಸಿದಿದ್ದು, ಜಿಲ್ಲೆಯ ಹಲವು ಮಾರ್ಗಗಳಲ್ಲಿ ಈಗಾಗಲೇ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ ಎಂದು ಸಂಘಟನೆ ತಿಳಿಸಿದೆ.
ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ 200ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಸಂಚಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಇದರಿಂದ ಬಸ್ ಸಿಬ್ಬಂದಿ ಉದ್ಯೋಗ ಕಳೆದುಕೊಂಡು ಪರ್ಯಾಯ ಉದ್ಯೋಗ ಹುಡುಕುವ ಪರಿಸ್ಥಿತಿ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಬಸ್ ಉದ್ಯಮಕ್ಕೆ ಸೂಕ್ತ ರಕ್ಷಣಾ ಕ್ರಮಗಳನ್ನು ಜಾರಿಗೆ ತರಬೇಕು ಹಾಗೂ ಸಂಕಷ್ಟ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಷ್ಕರ ಹಮ್ಮಿಕೊಳ್ಳಲಾಗಿದೆ.

