

ಮಂಗಳೂರು: ಬಾಲ್ಯದಲ್ಲಿಯೇ ಪೆನ್ಸಿಲ್ ರೇಖೆಗಳಿಗೆ ಜೀವ ತುಂಬಿ ತನ್ನ ಅದ್ಭುತ ಕಲಾಕೃತಿಗಳ ಮೂಲಕ ಗಮನ ಸೆಳೆದಿದ್ದ ಉಳ್ಳಾಲದ ಯುವ ಪ್ರತಿಭೆ ತನ್ಮಯಿ ಬಿ. ಉಳ್ಳಾಲ್ ಅವರು ಮಂಗಳೂರಿನ ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್ (SNBS) ವತಿಯಿಂದ ಆಯೋಜಿಸಲಾದ ಸ್ವಸ್ತಿಕಾ ಅವಾರ್ಡ್ಸ್ ನೈಟ್–2026 ಕಾರ್ಯಕ್ರಮದಲ್ಲಿ “Brilliant Swastikan” ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೇ 30ರಂದು ಸುಲ್ತಾನ್ ಬತ್ತೇರಿಯ ಸ್ವಸ್ತಿಕಾ ವಾಟರ್‌ಫ್ರಂಟ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಸ್ಥಳೀಯ ಸಾಧಕರು, ಉದ್ಯಮಿಗಳು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಉಳ್ಳಾಲ ಮೊಗವೀರಪಟ್ಟದ ನಿವಾಸಿಗಳಾದ ಭಾಸ್ಕರ್ ಕರ್ಕೇರ ಮತ್ತು ವೀಣಾ ಬಿ. ಉಳ್ಳಾಲ್ ದಂಪತಿಯ ಪುತ್ರಿಯಾಗಿರುವ ತನ್ಮಯಿ, ಬಾಲ್ಯದಿಂದಲೇ ಚಿತ್ರಕಲೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾಳೆ. ಕೋವಿಡ್ ಲಾಕ್‌ಡೌನ್ ಅವಧಿಯಲ್ಲಿ ಶಾಲಾ ರಜಾದಿನಗಳನ್ನು ಸದುಪಯೋಗಪಡಿಸಿಕೊಂಡು ಪ್ರತಿದಿನ ಒಂದೊಂದು ಪೆನ್ಸಿಲ್ ಆರ್ಟ್ ರಚಿಸುವ ಮೂಲಕ ತನ್ನ ಪ್ರತಿಭೆಯನ್ನು ಬೆಳೆಸಿಕೊಂಡಳು.
ಕೇವಲ 12ನೇ ವಯಸ್ಸಿನಲ್ಲಿಯೇ ಜಡೆಯ ಯುವತಿ, ತಾಯಿ-ಮಗು ವಾತ್ಸಲ್ಯ, ದಾರಿದೀಪ, ಮಾನವೀಯ ಮೌಲ್ಯಗಳು ಹಾಗೂ ಭಾವನೆಗಳನ್ನು ಪ್ರತಿಬಿಂಬಿಸುವ ಅನೇಕ ಪೆನ್ಸಿಲ್ ಸ್ಕೆಚ್‌ಗಳನ್ನು ರಚಿಸಿ ಮೆಚ್ಚುಗೆ ಪಡೆದಿದ್ದಾಳೆ. ಚಿತ್ರಗಳನ್ನು ಗಮನಿಸಿ ಅದೇ ರೀತಿ ನೈಜತೆಯಿಂದ ಚಿತ್ರಿಸುವ ವಿಶಿಷ್ಟ ಕೈಚಳಕ ತನ್ಮಯಿಯಲ್ಲಿದೆ.
ಪ್ರಶಸ್ತಿಗಳಿಗಾಗಿ ಅಥವಾ ಖ್ಯಾತಿಗಾಗಿ ಚಿತ್ರಕಲೆ ಮಾಡದೆ, ತನ್ನ ಆಸಕ್ತಿ ಮತ್ತು ಕಲೆಯ ಮೇಲಿನ ಪ್ರೀತಿಯಿಂದಲೇ ಈ ಸಾಧನೆ ಮಾಡಿರುವುದು ವಿಶೇಷ. ಬಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯಾಗಿರುವ ತನ್ಮಯಿ, ಭರತನಾಟ್ಯ ಹಾಗೂ ಸಂಗೀತ ತರಬೇತಿಯನ್ನೂ ಪಡೆಯುತ್ತಿದ್ದು, ಭವಿಷ್ಯದಲ್ಲಿ ಶಿಕ್ಷಕಿಯಾಗುವ ಕನಸನ್ನು ಹೊಂದಿದ್ದಾಳೆ.
ಇತ್ತೀಚೆಗೆ ಸ್ವಸ್ತಿಕಾ ಅವಾರ್ಡ್ಸ್ ನೈಟ್–2026ರಲ್ಲಿ ದೊರೆತ “Brilliant Swastikan” ಪ್ರಶಸ್ತಿ, ಆಕೆಯ ಕಲಾ ಪಯಣಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದ್ದು, ಉಳ್ಳಾಲದ ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದೆ. ಕುಟುಂಬದ ಪ್ರೋತ್ಸಾಹ, ನಿರಂತರ ಅಭ್ಯಾಸ ಮತ್ತು ಕಲೆಯ ಮೇಲಿನ ಸಮರ್ಪಣೆಯ ಫಲವಾಗಿ ತನ್ಮಯಿ ಇಂದು ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.


