ಹಳೆಕೋಟೆ, ಜೂನ್ 13: ಭಾರತದ ಸಂವಿಧಾನದ ಆಶಯದಂತೆ ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ಇವಿಎಂ (ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್) ಮೂಲಕ ಹಳೆಕೋಟೆಯ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸಯ್ಯದ್ ಮದನಿ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್ತಿನ ಚುನಾವಣೆ ಯಶಸ್ವಿಯಾಗಿ ನಡೆಯಿತು. ಚುನಾವಣೆಯಲ್ಲಿ ರಂಸೀನಾ ಮುಖ್ಯಮಂತ್ರಿಯಾಗಿ ಹಾಗೂ ಆಯಿಷಾ ಶೈಮಾ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾದರು.

ಚುನಾವಣೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಹಾಗೂ ಶಾಲೆಯ ಗುರುತಿನ ಚೀಟಿಯನ್ನು ತೋರಿಸಿ ಮತದಾನದ ಅರ್ಹತೆ ಪಡೆದು, ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಈ ಚುನಾವಣೆಯಲ್ಲಿ ಒಟ್ಟು ಎಂಟು ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಚುನಾವಣೆಗೆ ಎರಡು ದಿನಗಳ ಮುಂಚೆಯೇ ಅಭ್ಯರ್ಥಿಗಳು ತಮ್ಮ ಪರವಾಗಿ ಸಹಪಾಠಿಗಳಲ್ಲಿ ಮತಯಾಚನೆ ನಡೆಸಿ ಚುನಾವಣಾ ವಾತಾವರಣವನ್ನು ಸೃಷ್ಟಿಸಿದ್ದರು.
ವಿದ್ಯಾರ್ಥಿಗಳಿಗೆ ಸಾರ್ವತ್ರಿಕ ಚುನಾವಣೆಯ ಪರಿಕಲ್ಪನೆ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಚುನಾವಣೆ ಆಯೋಜಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಎಂ.ಕೆ. ಮಂಜನಾಡಿ ಅವರು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶ್ರೀಮತಿ ಸಪ್ನ ಅವರು ಚುನಾವಣಾಧಿಕಾರಿಯಾಗಿದ್ದು, ಶ್ರೀಮತಿ ಬಬಿತಾ ಸೆಲಿನ್ ಡಿಸೋಜಾ ಹಾಗೂ ಶ್ರೀಮತಿ ಶಕೀಲಾ ಅವರು ಅಧ್ಯಕ್ಷಾಧಿಕಾರಿಗಳಾಗಿ ಸೇವೆ ಸಲ್ಲಿಸಿದರು.
ಮತಗಟ್ಟೆ ಅಧಿಕಾರಿಗಳಾಗಿ ಶ್ರೀಮತಿ ಹಾಸಿನ್ ತಾಜ್, ಶ್ರೀಮತಿ ರಮ್ಲಾ ಬಾನು, ಶ್ರೀಮತಿ ಶಶಿಕಲಾ, ಶ್ರೀಮತಿ ಸೌಮ್ಯ, ಶ್ರೀಮತಿ ಅಸ್ಮಾ ಮಂಜನಾಡಿ ಹಾಗೂ ಶ್ರೀಮತಿ ದಾಮನಿ ಕಾರ್ಯನಿರ್ವಹಿಸಿದರು. ಶ್ರೀಮತಿ ಸುಮನಾ ಮತ್ತು ಶ್ರೀಮತಿ ವಿದ್ಯಾಶ್ರೀ ರಾವ್ ಅವರು ಬಿ.ಎಲ್.ಒ.ಗಳಾಗಿ ಜವಾಬ್ದಾರಿ ನಿರ್ವಹಿಸಿದರು.
ಸಾರ್ವಜನಿಕ ಚುನಾವಣೆಯಲ್ಲಿ ಹಿರಿಯರು ಮತ ಚಲಾಯಿಸುವ ಉತ್ಸಾಹವನ್ನು ವಿದ್ಯಾರ್ಥಿಗಳು ಈ ಚುನಾವಣೆಯಲ್ಲಿ ಪ್ರದರ್ಶಿಸಿ ಸಂತೋಷ ವ್ಯಕ್ತಪಡಿಸಿದರು ಎಂದು ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಎಂ.ಕೆ. ಮಂಜನಾಡಿ ತಿಳಿಸಿದ್ದಾರೆ.

