ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಬೀಡಿ ಉತ್ಪಾದನೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಬೆಲೆ ಏರಿಕೆಗೆ ಅನುಸಾರವಾಗಿ 1983 ರಿಂದ ಜಾರಿಯಲ್ಲಿರುವ ತುಟ್ಟಿಭತ್ಯೆ ಕಾನೂನನ್ನು 2015-16 ಆರ್ಥಿಕ ವರ್ಷದಲ್ಲಿ ಕಂಪೆನಿ ನೀಡದೆ ಉಲ್ಲಂಘಿಸಿರುವುದರಿಂದ ಅನ್ಯಾಯಕ್ಕೊಳಗಾದ ಬೀಡಿ ಕಾರ್ಮಿಕರ ಪರವಾಗಿ ಕೋಟೆಕಾರು ಸರ್ಕಲ್ ಬೀಡಿ ಲೇಬರ್ ಯೂನಿಯನ್ ವತಿಯಿಂದ ಗುರುವಾರ ಉಳ್ಳಾಲದಲ್ಲಿ ಪ್ರತಿಭಟನೆ ನಡೆಯಿತು.
ಕಾರ್ಮಿಕರಿಗೆ 2015 ಎ.1 ರಿಂದ ಸಾವಿರ ಬೀಡಿಗೆ, ಉತ್ಪಾದನೆಯ ಮೇಲೆ ಸಿಗಬೇಕಾಗಿದ್ದ ರೂ.12.75 ತುಟ್ಟಿ ಭತ್ಯೆ ಹಣ ಹಾಗೂ ಅದಕ್ಕೆ ಹೊಂದಿಕೊಂಡು ಸಿಗಬೇಕಾಗಿರುವ ರೂ. 3.37 ಬೋನಸ್, ಭವಿಷ್ಯನಿಧಿ ಹಣದಲ್ಲಿ ವಂಚನೆಯಾಗಿದೆ. ಬೆಲೆ ಏರಿಕೆಯಿಂದ ತತ್ತರಿಸುವ ಸಮಯದಲ್ಲಿ ಕಾರ್ಮಿಕರು ಇಂತಹ ವಂಚನೆಯಿಂದ ಅನ್ಯಾಯಕ್ಕೊಳಗಾಗಿದ್ದಾರೆ. ತುಟ್ಟಿ ಭತ್ಯೆ ಕಾಯ್ದೆಯನ್ನು ಸರಕಾರ ರದ್ದುಗೊಳಿಸದ ಹಿನ್ನೆಲೆಯಲ್ಲಿ ಸರಕಾರದ ಆದೇಶವನ್ನು ಕಂಪೆನಿ ಉಲ್ಲಂಘಿಸಿದಂತಾಗಿದೆ. ಈ ಕ್ರಮವನ್ನು ಹಿಂದಕ್ಕೆ ಪಡೆದು ಕೊಡಬೇಕಾದ ತುಟ್ಟಿ ಭತ್ಯೆಯನ್ನು ಕೂಡಲೇ ವಿತರಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು ಕಂಪೆನಿ ವಿತರಿಸುತ್ತಿರುವ ನಕರಿ ಎಲೆಯಿಂದಾಗಿ ಕಾರ್ಮಿಕರಿಗೆ ಬೀಡಿ ಕಟ್ಟಲು ಅಸಾಧ್ಯವಾಗುತ್ತಿದೆ. ಎವರೇಜು ಭತಿಯಾಗದೆ ನಷ್ಟ ಭರಿಸುವ ಸ್ಥಿತಿಯೂ ನಿರ್ಮಾಣ ಆಗಿದೆ. ಕಂಪೆನಿಯಲ್ಲಿ ಲಾಗ್ ಬುಕ್ ಇಲ್ಲದೇ ದುಡಿಯುವ ಕಾರ್ಮಿಕರು ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದ್ದಾರೆ.
ಈ ವೇಳೆ ಕೋಟೆಕಾರು ಸರ್ಕಲ್ ಬಿಡಿ ಲೇಬರ್ ಯೂನಿಯನ್ನಿನ ಅಧ್ಯಕ್ಷೆ ಪದ್ಮಾವತಿ.ಯಸ್,ಶೆಟ್ಟಿ, ಕಾರ್ಯದರ್ಶಿ ಯು.ಜಯಂತ ನಾೈಕ್, ಸುಂದರ ಕುಂಪಲ, ಬಾಬು ಪಿಲಾರ್, ಕರಿಯಪ್ಪ ಗಟ್ಟಿ, ಜನಾರ್ದನ .ಕೆ, ನಾರಾಯಣ ತಲಪಾಡಿ, ವಿಲಾಸಿನಿ ತೊಕ್ಕೊಟ್ಟು, ಬೇಬಿ ಕಲ್ಲಾಪು, ಹರಿಣಾಕ್ಷಿ ತಲಪಾಡಿ, ಶ್ರೀನಿವಾಸ ಉಳ್ಳಾಲಬೈಲು, ಗೀತಾ ಪಾವೂರು, ಜಯಂತ ಉಳ್ಳಾಲ ಬೈಲು, ನಾರಾಯಣ ನಲಿಕೆ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಉಳ್ಳಾಲ ಅಬ್ಬಕ್ಕ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಜಾಥ ಉಳ್ಳಾಲದ ಬಸ್ತಿಪಡ್ಪು ಗಣೇಶ್ ಬೀಡೀಸ್ ಸಂಸ್ಥೆಯ ಗುರುಕೃಪಾ ಇಂಡಸ್ಟ್ರೀಸ್ ಎದುರು ಮುಕ್ತಾಯಗೊಂಡಿತು. ಬಳಿಕ ಉಳ್ಳಾಲ ಪೇಟೆಯಲ್ಲಿರುವ ಸಿ.ಜೆ ಬೀಡಿ, ಭಾರತ್ ಬೀಡೀಸ್ ಡಿಪೋ ಎದುರುಗಡೆ ಪ್ರತಿಭಟನೆ ನಡೆಯಿತು.












