ಸೋಮೇಶ್ವರ : ಸೋಮೇಶ್ವರ ಪುರಸಭೆಯಲ್ಲಿ ವಿಶ್ವ ಪರಿಸರ ದಿನಾಚರಣೆ 2026 ರ ಅಂಗವಾಗಿ ಪುರಸಭಾ ಕಛೇರಿ ಆವರಣದಲ್ಲಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.



ಮುಖ್ಯಾಧಿಕಾರಿಯವರಾದ ಮತ್ತಡಿಯವರು ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಹಾಗೂ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2026 ರ ಆದೇಶದಂತೆ ವಿಂಗಡಿಸಿ ತ್ಯಾಜ್ಯ ವಿಲೇವಾರಿ ವಾಹನಕ್ಕೆ ನೀಡುವುದು ಪ್ರತಿಯೊಬ್ಬ ನಾಗರೀಕರ ಕರ್ತವ್ಯವಾಗಿರುತ್ತದೆ. ಇದನ್ನು ಎಲ್ಲರೂ ಪಾಲಿಸಬೇಕೆಂದು ಪುರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಅರಿವು ಮೂಡಿಸುವ ಬಗ್ಗೆ ಮಾಹಿತಿ ನೀಡಿದರು. ಸೋಮೇಶ್ವರ ಪುರಸಭೆಯನ್ನು ಮಾದರಿ ಪುರಸಭೆಯನ್ನಾಗಿ ಮಾಡುವಲ್ಲಿ ಎಲ್ಲರ ಸಹಕಾರ ಅತ್ಯಗತ್ಯ . ಇದಕ್ಕೆ ಎಲ್ಲರೂ ಸಹಕಾರ ಒದಗಿಸುವಂತೆ ಮನವಿ ಮಾಡಿದರು.
ಘನತ್ಯಾಜ್ಯ ವಸ್ತು ನಿರ್ವಹಣೆ ನಿಯಮಗಳು 2026ರ ಆದೇಶದಂತೆ ನಾಲ್ಕು ವಿಧದ ತ್ಯಾಜ್ಯ ವಿಂಗಡಣೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿ ಈ ಬಗ್ಗೆ ಪರಿಸರ ಅಭಿಯಂತರರಾದ ಪುನೀತ್ ರವರು ವಾರ್ಡ್ ಸದಸ್ಯರು, ಸಿಬ್ಬಂದಿಗಳು ,ಪೌರಕಾರ್ಮಿಕರು ಹಾಗೂ ಕಮ್ಯುನಿಟಿ ಮೊಬಿಲೈಝರ್ಸ್ ಗೆ ಮಾಹಿತಿಯನ್ನು ನೀಡಿದರು.
ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್ ರವರು ಮಾತನಾಡಿ, ನೀರು ಅಂಗಡಿಯಲ್ಲಿ ಮಾರಾಟ ಮಾಡಬಹುದು ಎಂದು ಯಾರು ಯೋಚಿಸಲು ಸಾಧ್ಯ ಇರಲಿಲ್ಲ, ನಾವೇನಾದರೂ ಎಚ್ಚರ ತಪ್ಪಿದರೆ ಮುಂದಕ್ಕೆ ಗಾಳಿಯನ್ನು ಅಂಗಡಿಯಿಂದ ತೆಗೆದು ಕೊಳ್ಳುವ ಪರಿಸ್ಥಿತಿ ಬರಬಹುದು, ಅದ್ದರಿಂದ ಮರ ಗಿಡಗಳ ರಕ್ಷಣೆ ಮಾಡೋಣ, ರಸ್ತೆ , ಚರಂಡಿ ಸಮಸ್ಯೆ ಇದ್ದರು ಬದುಕಬಹುದು, ತ್ಯಾಜ್ಯ ವಿಲೇವಾರಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ ಇದ್ದರೆ, ಜೀವ ಸಂಕುಲ ಬದುಕಲು ಕಷ್ಟ ಎಂಬುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ, ಸ್ಥಾಯಿಸಮಿತಿ ಅಧ್ಯಕ್ಷರು, ಗೌರವಾನ್ವಿತ ಸದಸ್ಯರುಗಳು, ಕಂದಾಯ ಅಧಿಕಾರಿ, ಕಛೇರಿ ವ್ಯವಸ್ಥಾಪಕರು, ಕಿರಿಯ ಅಭಿಯಂತರರು, ಕಂದಾಯ ನಿರೀಕ್ಷಕರು, ಸಿಬ್ಬಂದಿವರ್ಗ, ಪೌರಕಾರ್ಮಿಕರು ಹಾಗೂ ಕಮ್ಯುನಿಟಿ ಮೊಬಿಲೈಝರ್ಸ್ ಗಳು ಉಪಸ್ಥಿತರಿದ್ದರು. ಸ್ವಪ್ನಾ ಇವರು ಸ್ವಾಗತಿಸಿ, ಹಿರಿಯ ಆರೋಗ್ಯ ನಿರೀಕ್ಷಕರಾದ ಲಿಲ್ಲಿ ನಾಯರ್ ಇವರು ವಂದಿಸಿದರು.

