ಮಂಗಳೂರು : ಕುದ್ರೋಳಿಯ ನಿವಾಸಿಯಾದ 70 ವರ್ಷದ ಹಿರಿಯ ನಾಗರಿಕಳಾದ ದೇವಕಿ ಕೊಟ್ಯಾನ್ ಅವರು ತಾಂತ್ರಿಕ ಕಾರಣ ಒಡ್ಡಿ ಗ್ಯಾಸ್ ಸಿಲಿಂಡರ್ ವಿತರಣೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಆಹಾರ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.


ಕಳೆದ ಸುಮಾರು 30 ವರ್ಷಗಳಿಂದ ಮಿಥಿಲಾ ಭಾರತ್ ಗ್ಯಾಸ್ ಡಿಸ್ಟ್ರಿಬ್ಯೂಟರ್ ಮೂಲಕ ಗ್ಯಾಸ್ ಸಪ್ಲೈ ಪಡೆಯುತ್ತಿದ್ದ ಅವರು, ಇತ್ತೀಚೆಗೆ “ಕಣ್ಣಿನ ಮ್ಯಾಪಿಂಗ್” ಸಂಬಂಧಿತ ತಾಂತ್ರಿಕ ಸಮಸ್ಯೆ ಎಂಬ ಕಾರಣ ನೀಡಿ ಗ್ಯಾಸ್ ನೀಡಲು ನಿರಾಕರಿಸಲಾಗಿದೆ ಎಂದು ದೂರಿದ್ದಾರೆ.
ತಾವು ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಸಹಾಯ ಮಾಡಲು ಯಾರೂ ಇಲ್ಲದ ಪರಿಸ್ಥಿತಿಯಲ್ಲಿ ಗ್ಯಾಸ್ ಸಪ್ಲೈ ಸ್ಥಗಿತಗೊಂಡಿರುವುದರಿಂದ ದಿನನಿತ್ಯದ ಊಟ ತಯಾರಿಸಲು ತೀವ್ರ ತೊಂದರೆ ಅನುಭವಿಸುತ್ತಿದ್ದೇನೆ ಎಂದು ದೇವಕಿ ಕೊಟ್ಯಾನ್ ತಿಳಿಸಿದ್ದಾರೆ.
ಈ ಕುರಿತು ಅವರು ದಕ್ಷಿಣ ಕನ್ನಡ ಆಹಾರ ಇಲಾಖೆಯ ಉಪ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದು, 70 ವರ್ಷದ ಹಿರಿಯ ನಾಗರಿಕಳಾದ ತಮ್ಮ ಪರಿಸ್ಥಿತಿಯನ್ನು ಮಾನವೀಯ ದೃಷ್ಟಿಯಿಂದ ಪರಿಗಣಿಸಿ ತಕ್ಷಣ ಸಮಸ್ಯೆ ಪರಿಹರಿಸಿ ಗ್ಯಾಸ್ ವಿತರಣೆ ಪುನರಾರಂಭಿಸಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ, ಹಿರಿಯ ನಾಗರಿಕಳೊಬ್ಬರಿಗೆ ತಾಂತ್ರಿಕ ಕಾರಣಗಳನ್ನು ಒಡ್ಡಿ ಅಗತ್ಯ ಸೇವೆಯನ್ನು ನಿರಾಕರಿಸಿರುವುದು ಮಾನವೀಯತೆ ವಿರುದ್ಧದ ನಡೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂತಹ ನಿರ್ಲಕ್ಷ್ಯ ವಹಿಸುವ ಗ್ಯಾಸ್ ಏಜೆನ್ಸಿಗಳ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

