ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಬೆಂಗಳೂರು ವಕೀಲರ ಸಂಘವು ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಮಾಡುವ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಒತ್ತಾಯಿಸಿರುವುದು ಇದೀಗ ರಾಜ್ಯದ ಕಾನೂನು ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಸಂಘದ ಅಧ್ಯಕ್ಷ Vivek Subba Reddy ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಮನವಿಯಲ್ಲಿ, ಸಮಗ್ರ ಅಧ್ಯಯನ, ಅಗತ್ಯತೆಯ ವಿಶ್ಲೇಷಣೆ ಹಾಗೂ ಅಂಕಿಅಂಶಗಳ ಆಧಾರವಿಲ್ಲದೆ ಇಂತಹ ಮಹತ್ವದ ನಿರ್ಧಾರ ಕೈಗೊಳ್ಳುವುದರಿಂದ ಹೈಕೋರ್ಟ್‌ನ ಪ್ರಾಮುಖ್ಯತೆ ಕುಗ್ಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ರಾಜ್ಯದ ಎಲ್ಲಾ ಹಿತಾಸಕ್ತಿಪಕ್ಷಗಳೊಂದಿಗೆ ಸಮಾಲೋಚನೆ ನಡೆಸದೆ ಯಾವುದೇ ಅಂತಿಮ ತೀರ್ಮಾನ ಕೈಗೊಳ್ಳಬಾರದು ಎಂದು ಕೂಡ ಮನವಿ ಮಾಡಲಾಗಿದೆ.
ಆದರೆ, ಈ ಬೆಳವಣಿಗೆಯ ನಡುವೆ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ವಕೀಲರ ಸಂಘಗಳು ಮತ್ತು ನ್ಯಾಯಪರ ಸಂಘಟನೆಗಳ ನಿಲುವು ಏನು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ವರ್ಷಗಳ ಕಾಲ ದೂರದ ಬೆಂಗಳೂರು ಪ್ರಯಾಣ, ಹೆಚ್ಚಿನ ವೆಚ್ಚ, ಸಮಯದ ನಷ್ಟ ಹಾಗೂ ಸಾಮಾನ್ಯ ಜನರ ನ್ಯಾಯ ಪ್ರಾಪ್ತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಕರಾವಳಿ ಮತ್ತು ಮಲೆನಾಡಿನ ಜನರಿಗೆ ಹೈಕೋರ್ಟ್ ಪೀಠದ ಅಗತ್ಯವಿದೆಯೇ ಎಂಬ ವಿಚಾರದ ಬಗ್ಗೆ ಈಗ ಸ್ಪಷ್ಟವಾದ ಚರ್ಚೆ ನಡೆಯಬೇಕಾಗಿದೆ.
ನ್ಯಾಯವೆಂಬುದು ಕೇವಲ ದೊಡ್ಡ ನಗರಗಳಿಗೆ ಸೀಮಿತವಾಗಬಾರದು; ಸಾಮಾನ್ಯ ನಾಗರಿಕನಿಗೂ ಸುಲಭವಾಗಿ ಲಭ್ಯವಾಗಬೇಕು ಎಂಬ ಅಭಿಪ್ರಾಯ ಒಂದು ಕಡೆ ಕೇಳಿಬರುತ್ತಿದ್ದರೆ, ಮತ್ತೊಂದು ಕಡೆ ನ್ಯಾಯಾಂಗದ ಏಕೀಕೃತ ವ್ಯವಸ್ಥೆಯ ಮಹತ್ವ ಉಳಿಯಬೇಕು ಎಂಬ ವಾದವೂ ಕೇಳಿಬರುತ್ತಿದೆ.
ಈಗ ಎಲ್ಲರ ಗಮನ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ವಕೀಲರ ಸಂಘಗಳತ್ತ ನೆಟ್ಟಿದೆ. ಅವರು ಮಂಗಳೂರು ಹೈಕೋರ್ಟ್ ಪೀಠದ ಪರ ನಿಲ್ಲುತ್ತಾರೆಯೇ? ಅಥವಾ ಬೆಂಗಳೂರು ವಕೀಲರ ಸಂಘದ ಅಭಿಪ್ರಾಯಕ್ಕೆ ಬೆಂಬಲ ನೀಡುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರ ನೀಡಬೇಕಾದ ಸಮಯ ಬಂದಿದೆ.
ನ್ಯಾಯಪರ ಜನತೆ ಈಗ ಕಾದು ನೋಡುತ್ತಿರುವುದು ಒಂದೇ ವಿಷಯ
“ಪ್ರಾದೇಶಿಕ ನ್ಯಾಯದ ಧ್ವನಿಗೆ ಯಾರು ಬೆಂಬಲ ನೀಡುತ್ತಾರೆ?”

