ನೀಟ್ ಪರೀಕ್ಷೆ ವಿಚಾರವಾಗಿ ದೇಶದಾದ್ಯಂತ ಪ್ರತಿಭಟನೆಗಳು, ಮುತ್ತಿಗೆಗಳು, ಧರಣಿಗಳು, ರಾಜಕೀಯ ಆರೋಪ-ಪ್ರತ್ಯಾರೋಪಗಳು ನಡೆಯುತ್ತಿವೆ. ವಿಶೇಷವಾಗಿ ವಿರೋಧ ಪಕ್ಷದ ಕಾಂಗ್ರೆಸ್ ನಾಯಕರು ಹಾಗೂ NSUI National Students’ Union of India ಸೇರಿದಂತೆ ಹಲವು ವಿದ್ಯಾರ್ಥಿ ಸಂಘಟನೆಗಳು ಹೋರಾಟ ನಡೆಸುತ್ತಿರುವುದಾಗಿ ಹೇಳುತ್ತಿವೆ. ಆದರೆ ಸಾರ್ವಜನಿಕರ ಮನಸ್ಸಿನಲ್ಲಿ ಒಂದು ಸರಳ ಪ್ರಶ್ನೆ ಮೂಡುತ್ತಿದೆ “ಇಷ್ಟು ಧರಣಿ, ಪ್ರತಿಭಟನೆಗಳ ನಂತರವೂ ಸರ್ಕಾರದ ನಿಲುವು ಬದಲಾಗದಿದ್ದರೆ, ಈ ಹೋರಾಟದ ಪರಿಣಾಮವೇನು?”

ಜನರು ಪ್ರಶ್ನಿಸುತ್ತಿದ್ದಾರೆ:
ಸರ್ಕಾರಕ್ಕೆ ನಿಜವಾಗಿಯೂ “ಬಿಸಿ” ಮುಟ್ಟಿದೆಯೇ?
ಧರಣಿ, ಮುತ್ತಿಗೆಗಳು ಕೇವಲ ಸುದ್ದಿಗಳಲ್ಲಿ ಕಾಣಿಸಿಕೊಳ್ಳುವುದಕ್ಕೋ, ಅಥವಾ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೋ?
ನೀಟ್ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪಗಳು ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದವು. ವಿದ್ಯಾರ್ಥಿಗಳು ಮತ್ತು ಪೋಷಕರು ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆ ಹಾಗೂ ಭದ್ರತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಪ್ರತಿಭಟನೆಗಳು ಹೆಚ್ಚಾದರೂ, ಸರ್ಕಾರದ ನಿರ್ಧಾರಗಳಲ್ಲಿ ದೊಡ್ಡ ಬದಲಾವಣೆ ಕಂಡುಬಂದಿಲ್ಲ ಎಂಬ ಟೀಕೆ ಕೇಳಿಬರುತ್ತಿದೆ.
ಪ್ರತಿಭಟನೆ ಪ್ರಜಾಪ್ರಭುತ್ವದ ಹಕ್ಕು. ಆದರೆ ಪರಿಣಾಮಕಾರಿತ್ವವೇ ಮುಖ್ಯ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೀಟ್ ಪರೀಕ್ಷೆ ವಿಚಾರದಲ್ಲಿ ಜನರು ಸ್ಪಷ್ಟ ಉತ್ತರ, ದೃಢ ನಿರ್ಧಾರ ಮತ್ತು ಪರ್ಯಾಯ ವ್ಯವಸ್ಥೆ ನಿರೀಕ್ಷಿಸುತ್ತಿದ್ದಾರೆ. ಕೇವಲ ಘೋಷಣೆಗಳು, ರಸ್ತೆಯಲ್ಲಿ ಕುಳಿತು ಧರಣಿ ಮಾಡುವುದರಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ವಿಧ್ಯಾರ್ಥಿ ವಲಯದಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿದೆ “ಪ್ರತಿಭಟನೆಗಳ ಹಿಂದೆ ನಿಜವಾದ ವಿದ್ಯಾರ್ಥಿ ಹಿತಾಸಕ್ತಿ ಇದೆಯೇ? ಅಥವಾ ಇದು ರಾಜಕೀಯ ಅಸ್ತ್ರವಾಗಿದೆಯೇ?”
ಯಾಕೆಂದರೆ ಸರ್ಕಾರ ಇನ್ನೂ ತನ್ನ ನಿಲುವಿನಿಂದ ಹಿಂದೆ ಸರಿದ ಲಕ್ಷಣ ಕಾಣಿಸುತ್ತಿಲ್ಲ.
ಇದರ ನಡುವೆ ಮತ್ತೊಂದು ಪ್ರಶ್ನೆ ತೀವ್ರವಾಗಿ ಕೇಳಿಬರುತ್ತಿದೆ — ವಿದ್ಯಾರ್ಥಿ ಸಂಘಟನೆಗಳು ಪ್ರಬಲವಾಗಿಲ್ಲವೇ?
ಒಮ್ಮೆ ವಿದ್ಯಾರ್ಥಿ ಹೋರಾಟಗಳು ಸರ್ಕಾರಗಳನ್ನು ನಡುಗಿಸುವ ಶಕ್ತಿಯಾಗಿದ್ದವು. ಇಂದು ವಿದ್ಯಾರ್ಥಿಗಳ ಪರವಾಗಿ ರಾಜಕೀಯ ನಾಯಕರು ಹೆಚ್ಚು ಮಾತನಾಡುತ್ತಿದ್ದಾರೆ; ಆದರೆ ವಿದ್ಯಾರ್ಥಿಗಳ ಸ್ವರ, ಸಂಘಟಿತ ಹೋರಾಟ ಮತ್ತು ನೇರ ನಾಯಕತ್ವ ಅಷ್ಟಾಗಿ ಕಾಣಿಸುತ್ತಿಲ್ಲ ಎಂಬ ಟೀಕೆ ವ್ಯಕ್ತವಾಗುತ್ತಿದೆ.
ಜನರ ಅಭಿಪ್ರಾಯ ಏನೆಂದರೆ, ಯಾವ ಹೋರಾಟವಾದರೂ ಅದು ಜನಜೀವನ, ಆಡಳಿತ ಹಾಗೂ ನೀತಿ ನಿರ್ಧಾರಗಳ ಮೇಲೆ ಪರಿಣಾಮ ಬೀಳಬೇಕು. ಇಲ್ಲದಿದ್ದರೆ ಅದು ಕೇವಲ ಕಾರ್ಯಕ್ರಮವಾಗಿ ಉಳಿಯುತ್ತದೆ. “ಬಿಸಿ ಮುಟ್ಟಿಲ್ಲ ಅಂದರೆ ಧರಣಿ ಪರಿಣಾಮಕಾರಿ ಇಲ್ಲ” ಎಂಬ ಮಾತು ಈಗ ಸಾಮಾನ್ಯ ಜನರ ನಡುವೆ ಕೇಳಿಬರುತ್ತಿದೆ.
ವಿದ್ಯಾರ್ಥಿಗಳ ಭವಿಷ್ಯ, ಶಿಕ್ಷಣದ ಸಮಾನತೆ ಮತ್ತು ಪರೀಕ್ಷಾ ವ್ಯವಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಗಂಭೀರ ಚರ್ಚೆ ನಡೆಯಬೇಕಾದ ಸಮಯದಲ್ಲಿ, ರಾಜಕೀಯ ಪಕ್ಷಗಳು ಆರೋಪ-ಪ್ರತ್ಯಾರೋಪ ಮೀರಿಸಿ ಸ್ಪಷ್ಟ ಪರಿಹಾರ ಮಾರ್ಗ ನೀಡಬೇಕಾಗಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

