ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ತೊಕ್ಕೊಟ್ಟು: ದಕ್ಷಿಣ ಭಾರತದ ಜನ ಸ್ವಾಭಿಮಾನದಿಂದ ಬದುಕಲು ನಾರಾಯಣ ಗುರುಗಳ ಆದರ್ಶಗಳಿಂದ ಸಾಧ್ಯವಾಗಿದೆ ಎಂದು ಮಂಗಳೂರು ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಅಭಿಪ್ರಾಯಪಟ್ಟರು.
ತೊಕ್ಕೊಟ್ಟಿನ ಸುವರ್ಣ ಕಾಂಪ್ಲೆಕ್ಸ್ ನಲ್ಲಿ ಭಾನುವಾರ ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಕೇಂದ್ರ ಸಮಿತಿ ತೊಕ್ಕೊಟ್ಟು , ಉಳ್ಳಾಲ ಇದರ ವತಿಯಿಂದ ಗುರುಸ್ಮರಣೆ – ಬ್ರಹ್ಮಶ್ರೀ ಚೈತನ್ಯ ಸಭೆಯಲ್ಲಿ ಗುರು ಸಂದೇಶ ನೀಡಿದರು.

ಗುರುಗಳು ಬಿತ್ತಿರುವ ಚಿಂತನೆಗಳು, ಶಕ್ತಿಗಳ ಸೂಕ್ಷ್ಮವಾಗಿ ಅವಲೋಕನ ಮಾಡಬೇಕಿದೆ. ಅವರ ಆದರ್ಶಗಳು ದಕ್ಷಿಣದ ಜನರಿಗೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿದೆಯಾದರೂ ಎಲ್ಲರೂ ಅದನ್ನು ಒಪ್ಪುತ್ತಿಲ್ಲ. ಬಸವಣ್ಣ, ಗೌತಮ ಬುದ್ಧ, ಅಂಬೇಡ್ಕರ್, ಮಹಾತ್ಮ ಗಾಂಧಿ ಇಂತಹ ಮಹಾತ್ಮರಿಗೆ ಸಿಕ್ಕ ಪ್ರಚಾರ ಶೋಷಣೆಗೊಳಗಾದ ಸಮಾಜದ ಪರ ನಿಂತ ಗುರುಗಳಿಗೆ ಸಿಗದೇ ಇರುವುದು ಖೇದಕರ. ಮುಂದಿನ ದಿನಗಳಲ್ಲಾದರೂ ಅವರ ಚಿಂತನೆಗಳು ಪಠ್ಯಪುಸ್ತಕಗಳಲ್ಲಿ ಅಳವಡಿಕೆಯಾಗಲು ಎಲ್ಲರೂ ಎದ್ದುನಿಲ್ಲಬೇಕಾಗಿದೆ.
ಸಾಂಪ್ರಾದಾಯಿಕ ಶಿಕ್ಷಣದ ಜತೆಗೆ ವೃತ್ತಿ ಶಿಕ್ಷಣವನ್ನು ಪಡೆಯಬೇಕು ಅನ್ನುವ ಅವರ ಬೋಧನೆ ಇಂದು ಸ್ಮರಣೀಯ. ಸದಾ ಜನರ ನೆನಪಲ್ಲಿ ಇರಬೇಕಾದ ಗುರುಗಳ ನೆನಪು ಕೇವಲ ಗುರುಜಯಂತಿಗೆ ಮಾತ್ರ ಸೀಮಿತವಾಗಿರುವುದು ದುರದೃಷ್ಟ ಸಂಗತಿ ಎಂದ ಅವರು ಜೀವಸಂಕುಲ, ಪಶ್ಚಿಮ ಘಟ್ಟ, ಪರಿಸರವನ್ನು ನಾಶ ಮಾಡಿ ಎತ್ತಿನಹೊಳೆ ನೇತ್ರಾವತಿ ನದಿ ತಿರುವು ಯೋಜನೆಯನ್ನು ನಿರ್ಮಾಣಕ್ಕೆ ಎಲ್ಲರೂ ವಿರೋಧಿಸಬೇಕಿದೆ. ಅತಿಥಿಗಳನ್ನು ಸ್ವಾಗತಿಸಿ ಆತಿಥ್ಯ ಕೊಡುವ ಜಿಲ್ಲೆಯ ಜನರಿಗೆ ನೀರು ಕೊಡಲು ಯಾವುದೇ ವಿರೋಧವಿಲ್ಲ. ಆದರೆ ಜಿಲ್ಲೆಯ ಜನರನ್ನು ಕೊಂದು ಅವೈಜ್ಞಾನಿಕ ಯೋಜನೆಯನ್ನು ರೂಪಿಸಿ ಯಾರಿಗೂ ನೀರಿಲ್ಲದಂತೆ ಮಾಡುವ ಯೋಜನೆಯ ವಿರುದ್ಧ ಹೋರಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಉದ್ಯಮ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಪುರಸ್ಕಾರ ಪಡೆದ ಸತೀಶ್ ಕರ್ಕೇರ ಅವರಿಗೆ ಬ್ರಹ್ಮಶ್ರೀ ಉದ್ಯಮ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆ ಸಲಹೆಗಾರ ಚಂದ್ರಶೇಖರ್ ಉಚ್ಚಿಲ್ , ವೇದಿಕೆಯ ಪ್ರಧಾನ ಸಂಚಾಲಕ ಕೆ.ಟಿ.ಸುವರ್ಣ, ಕೋಶಾಧಿಕಾರಿ ಲಕ್ಷ್ಮಣ ಪೂಜಾರಿ, ಗೋಪಿನಾಥ್ ಬಗಂಬಿಲ, ಶಿವರಾಜ್ ಕರ್ಕೇರಾ, ರವಿ ಮಂಜನಾಡಿ, ರವಿ ಸುವರ್ಣ, ರಾಜೇಶ್ ಕೆರೆಬೈಲು, ಭಗವಾನ್‍ದಾಸ್ ತೊಕ್ಕೊಟ್ಟು, ಗಣೇಶ್ ಪಾಯದ ಬಳಿ, ಭಾಸ್ಕರ ಮಂಜನಾಡಿ ಉಪಸ್ಥಿತರಿದ್ದರು.
ಬ್ರಹ್ಮಶ್ರೀ ಬಿಲ್ಲವ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಹರೀಶ್ ಮುಂಡೋಳಿ ಸ್ವಾಗತಿಸಿದರು. ಅಧ್ಯಕ್ಷ ಆನಂದ ಕೆ. ಅಸೈಗೋಳಿ ಪ್ರಸ್ತಾವನೆಗೈದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಜೀವನ್ ಕುಮಾರ್ ತೊಕ್ಕೊಟು ಅಭಿನಂದನಾ ಭಾಷಣ ಮಾಡಿದರು. ಹರೀಶ್ ಅಂಬ್ಲಮೊಗರು ವಂದಿಸಿದರು.




