ಬೇಸಿಗೆಯ ತೀವ್ರ ಉಷ್ಣತೆಯಲ್ಲಿ ರಸ್ತೆಗಳಲ್ಲಿ ಸಂಚಾರ ನಿಯಂತ್ರಣ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಉರಿ ಬಿಸಿಲಿನಲ್ಲಿ ಗಂಟೆಗಳ ಕಾಲ ನಿಲ್ಲುವುದರಿಂದ ದೇಹ ನಿರ್ಜಲೀಕರಣ, ತಲೆಸುತ್ತು, ದಣಿವು ಮುಂತಾದ ಸಮಸ್ಯೆಗಳು ಸಾಮಾನ್ಯವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಅವರ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಅಗತ್ಯವಾಗಿದೆ.

ಈ ಹಿನ್ನಲೆಯಲ್ಲಿ, ಪೊಲೀಸ್ ಸಿಬ್ಬಂದಿಗಳ ಹಿತದೃಷ್ಟಿಯಿಂದ ಕರ್ತವ್ಯದ ಸ್ಥಳಗಳಲ್ಲಿ ನೆರಳಿಗಾಗಿ ಪ್ಯಾರಾಚೂಟ್ ಕೊಡೆಗಳ ವ್ಯವಸ್ಥೆ, ಮಾಸ್ಕ್ಗಳ ಪೂರೈಕೆ, ಸಮರ್ಪಕ ಕುಡಿಯುವ ನೀರು ಹಾಗೂ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಒದಗಿಸುವಂತೆ ಡಿಜಿ & ಐಜಿಪಿ ಕಚೇರಿಯಿಂದ ರಾಜ್ಯದ ಎಲ್ಲಾ ಘಟಕಾಧಿಕಾರಿಗಳಿಗೆ ಮಹತ್ವದ ಆದೇಶ ಹೊರಡಿಸಲಾಗಿದೆ. ಇದು ಪೊಲೀಸ್ ಸಿಬ್ಬಂದಿಯ ಆರೋಗ್ಯ ರಕ್ಷಣೆಗಾಗಿ ತೆಗೆದುಕೊಳ್ಳಲಾದ ಸಕಾರಾತ್ಮಕ ಮತ್ತು ಮಾನವೀಯ ಕ್ರಮವಾಗಿದೆ.
ಈ ರೀತಿಯ ಮೂಲಭೂತ ಸೌಲಭ್ಯಗಳು ಒದಗಿಸಿದರೆ, ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಆರೋಗ್ಯಕರವಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಟ್ರಾಫಿಕ್ ಸುವ್ಯವಸ್ಥಿತ ಕಾಪಾಡಲು ಸಾರ್ವಜನಿಕರೂ ಮಾನವೀಯತೆ ಮೆರೆಯಬೇಕು—ನಿಯಮಗಳನ್ನು ಪಾಲಿಸುವುದು, ಅನಾವಶ್ಯಕ ಗೊಂದಲ ಸೃಷ್ಟಿಸದಿರುವುದು ಹಾಗೂ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಸಹಕಾರ ನೀಡುವುದು ಅತ್ಯಂತ ಮುಖ್ಯ. ಸಾರ್ವಜನಿಕರ ಸುರಕ್ಷತೆಗಾಗಿ ಶ್ರಮಿಸುತ್ತಿರುವವರಿಗೆ ಗರಿಷ್ಠ ಸೌಲಭ್ಯ ಒದಗಿಸುವುದು ಸಮಾಜದ ಜವಾಬ್ದಾರಿಯಾಗಿದೆ.


