ಉಳ್ಳಾಲ: ದೊಡ್ಡ ಕ್ಷೇತ್ರಗಳಿಗೆ ಸರ್ಕಾರದಿಂದ ಅನುದಾನ ಲಭಿಸುತ್ತದೆ, ಆದರೆ ಸಣ್ಣ ಕ್ಷೇತ್ರಗಳು ಸ್ಥಳೀಯ ಜನಪ್ರತಿನಿಧಿಗಳು, ಭಕ್ತರ ಸಹಕಾರದಲ್ಲಿ ನಡೆಯಬೇಕಿದ್ದು ಈ ಹಿನ್ನೆಲೆಯಲ್ಲಿ ಸಹಕಾರ ನೀಡುವ ಅವಶ್ಯತೆ ಇದೆ ಎಂದು ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್ ಹೇಳಿದರು.

ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಯಿನಗರ ನಡಾರ್ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ದಶಮಾನೋತ್ಸವ ಪ್ರಯುಕ್ತ ಅಜ್ಜನ ಕಟ್ಟೆಯ ಅಗೇಲು ಪ್ರಸಾದ ತಯಾರಿಸುವ ಸ್ಥಳಕ್ಕೆ ಕೋಟೆಕಾರ್ ಪಟ್ಟಣ ಪಂಚಾಯತ್ ಅನುದಾನದಲ್ಲಿ ಅಳವಡಿಸಲಾದ ಮೇಲ್ಛಾವಣಿ ಉದ್ಘಾಟಿಸಿ ಮಾತನಾಡಿದರು.
ಕೋಟೆಕಾರ್ ಪಟ್ಟಣ ಪಂಚಾಯತ್ ಸದಸ್ಯ ಹರೀಶ್ ರಾವ್ ಮಾತನಾಡಿ, ಕ್ಷೇತ್ರದ ಸನಿಹದಲ್ಲಿರುವ ಸರ್ಕಾರಿ ತೆರೆದ ಬಾವಿಯಿಂದ ಭಕ್ತರಿಗೆ ತೊಂದರೆ ಆಗಬಾರದೆನ್ನುವ ನೆಲೆಯಲ್ಲಿ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮತಿ ಸದಸ್ಯನಾಗಿದ್ದ ಸಂದರ್ಭ ೨.೬೫ ಲಕ್ಷ ಅನುದಾನ ಮೀಸಲಿಟ್ಟು ಮುಚ್ಚಳಿಕೆ ಹಾಗೂ ಅಗೇಲು ಸೇವೆ ನಡೆಯುವ ಜಾಗಕ್ಕೆ ಮೇಲ್ಛಾವಣಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಕೋಶಾಧಿಕಾರಿಗಳಾದ ರುಕ್ಮಿಣಿ, ಹರಿಣಾಕ್ಷಿ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ್ ಸಾಯಿನಗರ, ಯಶವಂತ್ ಸಾಯಿನಗರ, ಸಾಯಿನಗರ ಸ್ವಾಮಿ ಕೊರಗಜ್ಜ ಕ್ಷೇತ್ರದ ಅರ್ಚಕರಾದ ಕೃಷ್ಣ ಶೆಟ್ಟಿ ಸಾಯಿನಗರ, ಕಿರಣ್ ಪೂಜಾರಿ ಕುಂಪಲ ಮೊದಲಾದವರು ಉಪಸ್ಥಿತರಿದ್ದರು.
ಸ್ವಾಮಿ ಕೊರಗಜ್ಜ ಸೇವಾ ಸಮಿತಿ ಅಧ್ಯಕ್ಷ ಕೃಷ್ಣಕಾಂತ್ ಕಾರ್ಯಕ್ರಮ ನಿರೂಪಿಸಿದರು

