

ಮಂಗಳೂರು: ಸಾಧಕರನ್ನು ಗೌರವಿಸಿದಾಗ ಮುಂದಿನ ಯುವ ಪೀಳಿಗೆಗೂ ಸ್ಪೂರ್ತಿ ದೊರೆಯುತ್ತದೆ, ಅಲ್ಲದೆ ಸಾಧಿಸಿದವರನ್ನು ಅಭಿನಂದಿಸುವುದು ಮತ್ತು ಪ್ರೋತ್ಸಾಹಿಸುವುದು ಎಲ್ಲರ ಸಾಮಾಜಿಕ ಜವಾಬ್ದಾರಿ ಕೂಡ ಆಗಿದೆ ಎಂದು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಅಭಿಪ್ರಾಯಪಟ್ಟರು.
ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಂಗಳೂರಿನಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ್ಯಾಂಕ್ ಗಳಿಸಿದ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನ ವಿದ್ಯಾರ್ಥಿಗಳಾದ ಸಮನ್ಯೂ ಎಸ್ ಶೆಟ್ಟಿ ಮತ್ತು ನಂದನ್ ನಾಯಕ್ ಇವರುಗಳನ್ನು ಅಭಿನಂದಿಸಿ ಮಾತನಾಡಿದರು.
ಅಭಿನಂದನ ಭಾಷಣವನ್ನು ಮಾಡಿದ ರಾಜ್ಯ ಕಾರ್ಯದರ್ಶಿ ತ್ಯಾಗಮ್ ಹರೇಕಳ, ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರ ಸಾಧನೆಯನ್ನು ಮಾಡದೇ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲೂ ರಾಜ್ಯಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ಇದು ಶ್ರೇಷ್ಠ ಮಟ್ಟದ ಸಾಧನೆಯಾಗಿದೆ . ಅಂತಹ ಸಾಧನೆ ಮಾಡಬೇಕಾದರೆ ಸತತ ಪರಿಶ್ರಮ, ತಾಳ್ಮೆ ಮತ್ತು ಛಲದ ಹಾದಿ ಇರಬೇಕು. ಇದರಿಂದ ಸಾಧನೆ ಪ್ರಾಪ್ತಿಯಾಗುತ್ತದೆ ಎಂದರು.
ಈ ಸಂದರ್ಭ ಮಂಗಳೂರು ಉತ್ತರ ತಾಲೂಕು ಅಧ್ಯಕ್ಷೆ ದಾಕ್ಷಯಣಮ್ಮ, ಗುರುಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲರು ಕಿಶೋರಿ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ಜಯಲಕ್ಷ್ಮಿ ಕುಂಪಲ, ಪದಾಧಿಕಾರಿಗಳಾದ ಸುಚಿತ್ರ ಸಮಾಜ ಸೇವಕರಾದ ಕುಡ್ಕುಂಜೆ ಕಸ್ತೂರಿ ಪೈ, ಪೋಷಕರುಗಳಾದ ಅಕ್ಷತಾ ಸುದೀಶ್ ಕುಮಾರ್ ಶೆಟ್ಟಿ, ಸುಷ್ಮಾ ಶೆಟ್ಟಿ, ಸೌಮ್ಯ ರೈ, ವಿಜಯಲಕ್ಷ್ಮಿ, ಚಂದ್ರಹಾಸ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರತೀಪ ಎ ಆರ್ ಇವರನ್ನು ಸ್ವಾಗತಿಸಿದರು. ಜಿಲ್ಲಾ ಕೋಶಾಧಿಕಾರಿ ಪ್ರತಿಮಾ ಹೆಬ್ಬಾರ್ ವಂದಿಸಿದರು.


