ಬೆಂಗಳೂರು: ದ್ವಿಚಕ್ರ ವಾಹನ ಸವಾರರಿಗೆ ಅಪ್ರಿಯವೆನಿಸುವ ಸುದ್ದಿ ಸಾರಿಗೆ ಇಲಾಖೆಯಿಂದ ಬಂದಿದೆ. ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.
ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಅಧಿಕೃತ ಘೋಷಣೆಯಷ್ಟೆ ಬಾಕಿಯಿದೆ. ಅಧಿಕೃತವಾಗಿ ಕಡ್ಡಾಯ ಆದೇಶ ಜಾರಿಗೊಳಿಸುವ ಮುನ್ನ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ನವೆಂಬರ್ ವೇಳೆಗೆ ಮೊದಲ ನಗರವಾಗಿ ಬೆಂಗಳೂರಿನಲ್ಲಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯವಾಗಲಿದೆ. ನಂತರ ಉಳಿದ ಎಲ್ಲ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಈ ಆದೇಶ ಜಾರಿಗೆ ಬರಲಿದೆ.
ಈ ಬಗ್ಗೆ ಸಾರಿಗೆ ಇಲಾಖೆ ಆಯುಕ್ತ ರಾಮೇಗೌಡ, ಅಪಘಾತ ಪ್ರಕರಣಗಳಲ್ಲಿ ಹಿಂಬದಿ ಸವಾರರೇ ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ. ಹೀಗಾಗಿ ಹಿಂಬದಿ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ 1.5 ಕೋಟಿಗೂ ಅಧಿಕ ದ್ವಿಚಕ್ರ ವಾಹನಗಳಿವೆ. ಬೆಂಗಳೂರು ಒಂದರಲ್ಲೇ 35 ಲಕ್ಷ ದ್ವಿಚಕ್ರ ವಾಹನಗಳಿವೆ. ಈ ಹಿನ್ನೆಲೆಯಲ್ಲಿ ಮೊದಲಿಗೆ ಬೆಂಗಳೂರಿನಲ್ಲಿ ಜಾರಿಗೆ ತಂದು ನಂತರ ಉಳಿದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಗಳಲ್ಲಿ ಕಡ್ಡಾಯಗೊಳಿಸುವ ಯೋಜನೆ ಇದಾಗಿದೆ.
ದ್ವಿಚಕ್ರ ವಾಹನಗಳ ಅಪಘಾತ ಪ್ರಕರಣಗಳಲ್ಲಿ ಬಹುಪಾಲು ಹಿಂಬದಿ ಸವಾರರೇ ಪ್ರಾಣ ಕಳೆದುಕೊಳ್ಳುತ್ತಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. ಬೆಂಗಳೂರಿನಲ್ಲಿ 2015 ರ ಜನವರಿಯಿಂದ ಇಲ್ಲಿಯವರೆಗೆ ಸಂಭವಿಸಿದ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೆ 124 ಮಂದಿ ಪ್ರಾಣ ತೆತ್ತಿದ್ದಾರೆ. 3,500 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದರಿಮದ ಈ ನಿರ್ಧಾರಕ್ಕೆ ಬರಲಾಗಿದೆ.
ಈ ಬಗ್ಗೆ ‘ಈ ನಾಡು ಇಂಡಿಯಾ ನಮ್ಮ ಕನ್ನಡ’ ಜೊತೆ ಮಾತನಾಡಿದ ಬೆಂಗಳೂರು ಸಂಚಾರ ಪೆÇಲೀಸ್ ಹೆಚ್ಚುವರಿ ಕಮೀಷನರ್ ಎಂ.ಎ. ಸಲೀಂ, ನಗರದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಹೆಲ್ಮೆಟ್ ಇಲ್ಲದೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಿದೆ. ಈ ಬಗ್ಗೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವಂತೆ ಕೋರಿ ಸಾರಿಗೆ ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿದೆ. ಕಡ್ಡಾಯಗೊಳಿಸಿದರೆ ನಗರದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುವುದು ಎಂದರು. ಈಗಾಗಲೇ ಹೆಲ್ಮೆಟ್ ಕಡ್ಡಾಯದಿಂದ ಗೊಣಗಾಡುವ ಕೆಲವು ಬೈಕ್ ಸವಾರರು ಸಾರಿಗೆ ಇಲಾಖೆಯ ಈ ನಿರ್ಧಾರಕ್ಕೆ ಕಣ್ಣು ಕೆಂಪಗೆ ಮಾಡಿಕೊಳ್ಳೋ ಸಾಧ್ಯೆತೆಯೇ ಹೆಚ್ಚು.


