ಮಂಗಳೂರು: ಈಶ್ವರನ ಹೂದೋಟ ಎಂದೇ ಬಣ್ಣಿಸಲಾಗುವ ಪ್ರಶಾಂತ, ಪ್ರಕೃತಿಯ ಸೊಬಗು, ಹಸಿರು ಸಿರಿಯ ಮಧ್ಯೆ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿರುವ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮಾರ್ಚ್ 30ರಿಂದ ಏಪ್ರಿಲ್ 6ವರೆಗೆ ನಡೆಯುವ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿದೆ. ಏಪ್ರಿಲ್ ೭ರಂದು ಕಾರ್ಯಕರ್ತರ ಸಭೆ ನಡೆಯಲಿದೆ ಎಂದು ಮಂಗಳೂರಿನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ ಶ್ಯಾಮ್ ಹೇಳಿದರು.

ಭಾರತದ ಏಕಾದಶ ಪುಣ್ಯ ನದಿಗಳ ತೀರ್ಥದೊಂದಿಗೆ ಬ್ರಹ್ಮಕಲಶಾಭಿಷೇಕ ನಡೆಯಲಿರುವುದು ವಿಶೇಷವಾಗಿದೆ, (ಗಂಗೆ, ಯಮುನೆ, ಸರಸ್ವತಿ, ನರ್ಮದೆ, ಗಂಡಕೀ, ನಾರಾಯಣಿ, ತ್ರಿಶೂಲಿ, ಸರಯೂ, ಕಾವೇರಿ, ತುಂಗೆ, ನೇತ್ರಾವತಿ) ಈ ತೀರ್ಥದ ಭವ್ಯ ಮೆರವಣಿಗೆ ಸಂಗಮ ಕ್ಷೇತ್ರ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ, ಮಹಾಕಾಳಿ ದೇವಸ್ಥಾನದಿಂದ ಮಾರ್ಚ್ ೩೦ರಂದು ಚಾಲನೆಗೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆದು, ಹೊರೆಕಾಣಿಕೆಗಳ ಸಹಿತ ನಾಡಿನ ಸಾಧು, ಸಂತರ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಪದ್ಯಾಣ ತಲುಪಲಿದೆ ಎಂದವರು ಮಾಹಿತಿ ನೀಡಿದರು.
ಪದ್ಯಾಣದ ವಿಶೇಷ
ಸಪರಿವಾರ ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದರೆ ವಿದ್ಯೆ, ಬುದ್ಧಿ, ಆರೋಗ್ಯ, ಉದ್ಯೋಗ, ವಿವಾಹ, ಸತ್ಸಂತಾನ ಹಾಗೂ ಕೃಷಿ ಸಮೃದ್ಧಿಗಳನ್ನು ಅನುಗ್ರಹಿಸುತ್ತಾನೆ ಎಂಬ ನಂಬಿಕೆ ಇದೆ. ಶಿವನ ಜೊತೆ ಶಕ್ತಿಯ ನೆಲೆಯಾಗಿರುವ ಹಿನ್ನೆಲೆ ಇಲ್ಲಿ ನಡೆಯುವ ಶ್ರೀಚಕ್ರಪೂಜೆ ಹಲವರಿಗೆ ಉತ್ತಮ ಫಲವನ್ನು ಒದಗಿಸಿದೆ.
ಸಂಗೀತ, ಯಕ್ಷಗಾನ, ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ ಪದ್ಯಾಣ ಹಾಗೂ ಅದಕ್ಕೆ ಹೊಂದಿಕೊಂಡಂತಿರುವ ಪ್ರದೇಗಳಿಗೆ ಸೇರಿದವರು ರಾಜ್ಯ, ರಾಷ್ಟ್ರ ಖ್ಯಾತಿ ಗಳಿಸಿದ್ದಾರೆ.ಮಧ್ಯಾಹ್ನಕ್ಕೆ ಪದ್ಯಾಣ ಎಂಬುದು ಇಲ್ಲಿ ಪ್ರಚಲಿತವಿರುವ ಹಳೆಯ ಆಡುನುಡಿ. ಸ್ಥಳೀಯ ಮನೆಗಳಿಗೆ ಮಧ್ಯಾಹ್ನದ ಹೊತ್ತಿಗೆ ಯಾರೇ ಬಂದರೂ ಅವರಿಗೆ ಆತಿಥ್ಯ ನೀಡುವ ಮನೆಗಳು ಇಲ್ಲಿವೆ.
ವಿಟ್ಲದ ಅರಸು ಸೀಮೆಗೆ ಸೇರಿದ ಈ ದೇಗುಲ ಬಹಳ ಕಾಲ ಪಾಳುಬಿದ್ದಿದ್ದು, ಮುಳಿಹುಲ್ಲಿನ ಮಾಡಿನಿಂದ ಕೂಡಿತ್ತು. ಆರುನೂರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವನ್ನು ಪುನರ್ ನಿರ್ಮಾಣಗೊಳಿಸಿ ೧೯೭೫ರಲ್ಲಿ ಅಂದಿನ ಆಡಳಿತ ಮೊಕ್ತೇಸರರಾದ ದಿ. ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಪರವೂರ ಭಕ್ತರ ಸಹಕಾರದೊಂದಿಗೆ ನವೀಕೃತ ದೇವಾಲಯದಲ್ಲಿ ಶ್ರೀಚಕ್ರ ಸಹಿತ ಶ್ರೀಮಹಾಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆಯಾಗಿ ಬ್ರಹ್ಮಕಲಶಾಭಿಷೇಕವಾಯಿತು. ೧೯೯೨ ನೇ ಇಸವಿಯಲ್ಲಿ ದೇವಸ್ಥಾನದಲ್ಲಿ ಅಷ್ಟಮಂಗಲ ಪ್ರಶ್ನೆ ಚಿಂತನೆ ನಡೆಸಿ, ೧೯೯೪ ರಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಅಷ್ಟ ಬಂದ ಸಹಿತ ದ್ರವ್ಯಕಲಶಾಭಿಷೇಕವನ್ನು. ೨೦೦೬ ನೇ ಇಸವಿಯಲ್ಲಿ ನಾಗ- ಶಾಸ್ತಾರ ಪ್ರತಿಷ್ಠೆ, ಧೂಮಾವತಿ ಹಾಗೂ ಕೊರತಿ ದೈವಸ್ಥಾನದ ನವೀಕರಣ- ಬ್ರಹ್ಮಕಲಶ ೨೦೦೯ ಜನವರಿ ೪ ರಿಂದ ೧೧ರವರೆಗೆ ಶ್ರೀ ದೇವರ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ನಡೆದಿದೆ. ಇದೀಗ ಶ್ರೀದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕವನ್ನು ನಡೆಸಲು ತೀರ್ಮಾನಿಸಿ, ೨೦೨೪ರ ನವೆಂಬರ್ ೨೦ರಂದು ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮ ಭಟ್ಟರ ಮೂಲಕ ತಾಂಬೂಲ ಪ್ರಶ್ನೆಯನ್ನು ಶ್ರೀ ಕ್ಷೇತ್ರದಲ್ಲಿ ಇರಿಸಲಾಯಿತು. ಶ್ರೀ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವ, ದೈವಜ್ಞರ ನಿರ್ದೇಶನ ಹಾಗೂ ವಾಸ್ತುಶಿಲ್ಪಿಗಳಾದ ಶ್ರೀ ಎಸ್.ಎಂ.ಪ್ರಸಾದ ಮುನಿಯಂಗಳ ಇವರ ವಾಸ್ತುಶಿಲ್ಪ ಸಲಹೆಗಳ ಪ್ರಕಾರ, ಬ್ರಹ್ಮಕಲಶೋತ್ಸವ ಕಾರ್ಯ ನಡೆಸಲು ತೀರ್ಮಾನಿಸಲಾಯಿತು ಎಂದರು.
ಕಾರ್ಯಕ್ರಮ ವೈಭವ:
೨೦೨೬ ರ ಮಾರ್ಚ್ ೩೦ ರಿಂದ ಎಪ್ರಿಲ್ ೬ ರ ವರೆಗೆ ನಡೆಯಲಿರುವ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವದಲ್ಲಿ ವೈಭವದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿವೆ. ಮಹಾಲಿಂಗೇಶ್ವರನಿಗೆ ಪ್ರಿಯವಾದ ಭಜನೆ, ಭಕ್ತಿ ಸಂಗೀತ, ಯಕ್ಷಗಾನ ಮೇಳೈಸಲಿದೆ. ಏಪ್ರಿಲ್ ೭ರಂದು ಕಾರ್ಯಕರ್ತರ ಸಭೆ ನಡೆಯಲಿದ್ದು, ೨೦ರಂದು ದೃಢಕಲಶ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಬಿಲ್ವಪತ್ರೆ ಮತ್ತು ರುದ್ರಾಕ್ಷಿಯನ್ನು ಸ್ಮರಣಿಕೆಯನ್ನಾಗಿ ನೀಡಲಾಗುವುದು. ಸ್ಮರಣಿಕೆಯನ್ನು ಅರ್ಥಪೂರ್ಣವಾಗಿಸಲು ಪ್ಲಾಸ್ಟಿಕ್ಗಳನ್ನು ಬಳಸದೆ ಬಂದ ಅತಿಥಿಗಳನ್ನು ಗೌರವಿಸಲಾಗುವುದು. ಗ್ರಾಮಗೌರವ ಎಂಬ ಪರಿಕಲ್ಪನೆಯಲ್ಲಿ ಸ್ವಯಂಸೇವಕರನ್ನು ಗೌರವಿಸಲಾಗುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮೊಕ್ತೇಸರ ಸೇರಾಜೆ ಸತ್ಯನಾರಾಯಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಸಾಂಸ್ಕೃತಿಕ ಸಮಿತಿ ಸಂಚಾಲಕಿ ಪ್ರಣತಿ ಚೈತನ್ಯ ಪದ್ಯಾಣ, ವಿವಿಧ ಸಮಿತಿಗಳ ಪ್ರಮುಖರಾದ ವಿನೋದ್ ಶೆಟ್ಟಿ ಪಟ್ಲ, ಚೈತನ್ಯ ಪದ್ಯಾಣ ಉಪಸ್ಥಿತರಿದ್ದರು.
ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ
ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರಾಗಿ ಪದ್ಯಾಣ ತಿಮ್ಮಣ್ಣ ಭಟ್ಟ, ಪದ್ಯಾಣ ರಘುರಾಮ ಕಾರಂತ, ಅಧ್ಯಕ್ಷರಾಗಿ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರಾಗಿ ಡಾ.ಟಿ.ಶ್ಯಾಮ ಭಟ್, ಅಧ್ಯಕ್ಷರಾಗಿ ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ. ಅರುಣ್ ಶ್ಯಾಮ್, ಕಾರ್ಯಾಧ್ಯಕ್ಷರಾಗಿ ಶ್ಯಾಮಸುದರ್ಶನ ಹೊಸಮೂಲೆ, ಸಂಘಟನಾ ಕಾರ್ಯದರ್ಶಿಯಾಗಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು, ಕಾರ್ಯದರ್ಶಿಯಾಗಿ ಕೃಷ್ಣ ಎಂ.ಆರ್. ಕಡಬ, ಸಂಚಾಲಕರಾಗಿ ಸೇರಾಜೆ ಗೋಪಾಲಕೃಷ್ಣ ಭಟ್, ಕೋಶಾಧಿಕಾರಿಯಾಗಿ ಮಾಂಬಾಡಿ ವಿಷ್ಣು ಭಟ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಯಾಗಿ ಈಶಾನ್ಯ ಪದ್ಯಾಣ ಸಹಿತ ಪದಾಧಿಕಾರಿಗಳು, ಸರ್ವ ಸದಸ್ಯರೊಂದಿಗೆ ಹಲವು ಸಮಿತಿಗಳನ್ನು ರಚಿಸಿ ಹಗಲು ರಾತ್ರಿ ದೇವಸ್ಥಾನ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಯಶಸ್ಸಿಗೆ ದುಡಿಯುತ್ತಿದ್ದಾರೆ.
ಬಿಲ್ವಪತ್ರೆ ಮತ್ತು ರುದ್ರಾಕ್ಷಿಯನ್ನು ಸ್ಮರಣಿಕೆಯನ್ನಾಗಿ ನೀಡಲಾಗುವುದು. ಸ್ಮರಣಿಕೆಯನ್ನು ಅರ್ಥಪೂರ್ಣವಾಗಿಸಲು ಪ್ಲಾಸ್ಟಿಕ್ಗಳನ್ನು ಬಳಸದೆ ಬಂದ ಅತಿಥಿಗಳನ್ನು ಗೌರವಿಸಲಾಗುವುದು. ಗ್ರಾಮಗೌರವ ಎಂಬ ಪರಿಕಲ್ಪನೆಯಲ್ಲಿ ಸ್ವಯಂಸೇವಕರನ್ನು ಗೌರವಿಸಲಾಗುತ್ತದೆ ಎಂದರು.
ಪದ್ಯಾಣ ಬ್ರಹ್ಮಕಲಶೋತ್ಸವ: ಪ್ರತಿದಿನ ಕಾರ್ಯಕ್ರಮಗಳಿಗೆ ಆಗಮಿಸುವ ಗಣ್ಯರು, ಸಂತರ ವಿವರ:
ಮಾರ್ಚ್ ೩೦ರಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಮತ್ತು ಕಣಿಯೂರು ಶ್ರೀ ಮಹಾಬಲೇಶ್ವರ ಸ್ವಾಮೀಜಿ ಭಾಗವಹಿಸುವರು. ಹೈಕೋರ್ಟ್ ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳ, ಶ್ರೀ ಕ್ಷೇತ್ರ ಧರ್ಮಸ್ಥಳದ ಶ್ರದ್ಧಾ ಅಮಿತ್,
ಮಾರ್ಚ್ ೩೧ರಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂನ ಸಾಧ್ವಿ ಶ್ರೀ ಮಾತಾನಂದಮಯಿ ಆಶೀರ್ವಚನ, ದೆಹಲಿಯ ವಾಗ್ಮಿ ಕಾಜಲ್ ಹಿಂದುಸ್ತಾನಿ, ಏಪ್ರಿಲ್೧ರಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಏಪ್ರಿಲ್ ೨ರಂದು ಶ್ರೀ ಭೀಮನಕಟ್ಟೆ ಮಠದ ರಘುವರೇಂದ್ರ ತೀರ್ಥ ಶ್ರೀಪಾದರು,
ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಏಪ್ರಿಲ್ ೩ರಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಒಡಿಯೂರು ಸಂಸ್ಥಾನಂನ ಶ್ರೀ ಗುರುದೇವಾನಂದ ಸ್ವಾಮೀಜಿ, ಹೊರನಾಡು ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮಕರ್ತರಾದ ಡಾ. ಭೀಮೇಶ್ವರ ಜೋಷಿ, ಕೇಂದ್ರ ಮಾಜಿ ಸಚಿವ ಕದಂಬ ಫೌಂಡೇಶನ್ ಅಧ್ಯಕ್ಷ ಅನಂತಕುಮಾರ ಹೆಗಡೆ, ನೀಡುವರು. ಅಯೋಧ್ಯೆ ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಗೋಪಾಲ್ ಜಿ. ಮೈಸೂರು ಸಂಸದ ಹಾಗೂ ಮೈಸೂರು ಸಂಸ್ಥಾನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಏಪ್ರಿಲ್ ೪, ಶನಿವಾರ
ರಾಮಕೃಷ್ಣ ಮಠದ ಅಧ್ಯಕ್ಷ ಶ್ರೀ ಜಿತಕಾಮಾನಂದಜಿ ಮಹಾರಾಜ್, ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ, ಕರ್ನಾಟಕ ರಾಜ್ಯ ಗ್ರಾಹಕ ಆಯೋಗ ಅಧ್ಯಕ್ಷ ನ್ಯಾಯಮೂರ್ತಿ ಶಿವಶಂಕರೇಗೌಡ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶ್ರೀಪಾದ್ ಯೆಸ್ಸೊ ನಾಯಕ್, ಏಪ್ರಿಲ್ ೫, ಭಾನುವಾರ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠಾಧೀಶ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಮತ್ತು ಗುರುಪುರ ವಜ್ರದೇಹಿ ಮಠಾಧೀಶ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ವಿ.ಸೋಮಣ್ಣ, ಏಪ್ರಿಲ್ ೬ರಂದು ಶ್ರೀ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ, ಗೌರಿಗದ್ದೆ ಅವಧೂತ ವಿನಯ ಗುರೂಜಿ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ, ಏಪ್ರಿಲ್ ೭ರಂದು ಕಾರ್ಯಕರ್ತರ ಸಭೆಗೆ ಚಿತ್ರದುರ್ಗ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ, ಹಿರೇಹಡಗಲಿ ಕ್ಷೇತ್ರದ ಶ್ರೀ ಅಬಿನವ ಹಾಲಶ್ರೀ ಸ್ವಾಮೀಜಿ, ವಿಹಿಂಪ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್, ಹಿಂದು ಜಾಗರಣಾ ವೇದಿಕೆ ಕರ್ನಾಟಕ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ, ಹಿದಿಯ ವೈದ್ಯ ಡಾ.ಎಂ.ಕೆ.ಪ್ರಸಾದ್ ಭಂಡಾರಿ, ಧಾರ್ಮಿಕ ಮುಖಂಡ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ಭಾಗವಹಿಸುವರು ಎಂದು ಅರುಣ ಶ್ಯಾಮ್ ತಿಳಿಸಿದರು.

