ಕೊಣಾಜೆ: ವಿವೇಕಾನಂದರು ಕಟ್ಟಿದ ಪ್ರತಿಪಾದನೆಯ ಮೂಲವೇ ಮನುಷ್ಯ, ಮನುಷ್ಯತ್ವ. ಮಾನವಿಯತೆಯಲ್ಲಿ ಸುಪ್ತವಾದ ದೈವೀಕತೆಯೇ ಮನುಷ್ಯತ್ವ ಎಂದು ನಂಬಿದ ಅವರು ಇದರಿಂದಲೇ ಮನುಷ್ಯನ ಆಂತರಿಕ ವಿಕಾಸವನ್ಜು ಅರಿಯುವ ಪ್ರಯತ್ನ ಮಾಡಿ ಏಕತೆಯ ಮೂಲಕ ದೈವೀಕತೆಯನ್ನು ಕಂಡರು ಎಂದು ಸ್ವಾಮೀ ವಿವೇಕಾನಂದ ಶೈಕ್ಷಣಿಕ ಅನುಸಂಧಾನ ಗೊಟ್ಟಿಗೆರೆ ಬೆಂಗಳೂರು ಇದರ ಗೌರವ ಶೈಕ್ಷಣಿಕ ನಿರ್ದೇಶಕ ಡಾ.ಹೆಚ್ .ಎನ್ ಮುರಳೀಧರ ಅವರು ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ವತಿಯಿಂದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಪ್ರೊ.ವಿವೇಕ್ ರೈ ವಿಚಾರವೇದಿಕೆಯಲ್ಲಿ ನಡೆದ ವಿವೇಕವಾಣಿ ‘ ಸ್ವಾಮೀ ವಿವೇಕಾನಂದರ ವಿಶ್ವಧರ್ಮ ಆದರ್ಶ’ ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.
ಪ್ರಪಂಚದಲ್ಲಿ ಧರ್ಮದ ಹೆಸರಿನಲ್ಲಿ ಆದ ರಕ್ತಪಾತ ಬೇರೆ ಯಾವುದೇ ವಿಷಯದಲ್ಲಿ ಆಗಿಲ್ಲ ಎಂದಿದ್ದ ಅವರು ಧರ್ಮದ ಕರಾಳಮುಖವನ್ನು ಮೊತ್ತಮೊದಲ ಬಾರಿಗೆ ಗುರುತಿಸಿದವರು ವಿವೇಕಾನಂದರು. ವೈವಿಧ್ಯತೆಯ ಮೂಲಕವೇ ವಿಶ್ವಮಾನವತೆಯನ್ನು ಕಟ್ಟುವ ಪ್ರಯತ್ನಗಳಾಗಬೇಕು. ವೈವಿದ್ಯತೆಯ ಮೂಲಕವೇ ಏಕಸೂತ್ರತೆಯನ್ನು ಕಂಡುಕೊಳ್ಳಬೇಕಿದೆ ಎಂಬುದು ಅವರ ನಿಲುವಾಗಿತ್ತು ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾದ ಪ್ರೊ. ನಾಗಪ್ಪ ಗೌಡ ಅವರು, ನಮ್ಮ ದೇಶದಲ್ಲಿ ಅನೇಕ ದಾರ್ಶನಿಕರು ಮಹಾತ್ಮರು ಬಂದು ಹೋಗಿದ್ದಾರೆ. ಆದರೆ ಇತ್ತೀಚೆಗೆ ಅವರ ತತ್ವ, ಸಿದ್ದಾಂತದ ಪಾಲನೆಯ ಬದಲಾಗಿ ಅವರನ್ನು ಆರಾಧನೆಯ ರೂಪದಲ್ಲಿಯೇ ಹೆಚ್ಚಾಗಿ ಕಾಣುವಂತಾಗಿದೆ. ಯುವಕರನ್ನು ಸರಿಯಾದ ಪಥದಲ್ಲಿ ಕೊಂಡೊಯ್ಯುವ ಪ್ರಯತ್ನಗಳು ಸ್ವಾಮಿ ವಿವೇಕಾನಂದರ ಆದರ್ಶ, ತತ್ವ ಸಿದ್ದಾಂತಗಳಿಂದ ಆಗಬೇಕಿದೆ ಹಾಗೂ ಇಂತಹ ಉಪನ್ಯಾಸವು ಅನೇಕ ವಿಚಾರಧಾರೆಗಳ ಮೂಲಕ ಅರಿವನ್ನು ವಿಸ್ತರಿಸಲಿದೆ ಎಂದರು.
ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಚಂದ್ರು ಹೆಗ್ಡೆ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಧ್ಯಾಪಕರಾದ ಪ್ರೊ.ಸೋಮಣ್ಣ ಹೊಂಗಳ್ಳಿ ಅವರು ವಂದಿಸಿದರು. ವಿದ್ಯಾರ್ಥಿ ದುಶ್ಯಂತ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ, ಡಾ.ಯಶು ಕುಮಾರ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಸಂಶೋಧರು ,ವಿದ್ಯಾರ್ಥಿಗಳು ಉಪಸ್ಥಿತರಿದ್ದರು

