

ಉಳ್ಳಾಲವಾಣಿ ವಾರ್ತೆ
ಮಂಗಳೂರು: ಇಡೀ ರಾಜ್ಯವನ್ನೇ ಗೊಂದಲಕಾರಿಯನ್ನಾಗಿಸಿದ ಜಿಲ್ಲೆಯ ಸೌಜನ್ಯಾ ಹತ್ಯೆ ಪ್ರಕರಣ, ತನ್ನ ಎರಡೂ ಮಕ್ಕಳನ್ನು, ಕಾಲುಗಳನ್ನು ಕಳೆದುಕೊಂಡು, ಅವೈಜ್ಞಾನಿಕ ರಸ್ತೆ ಕಾಮಗಾರಿ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಮಂಜನಾಡಿಯ ಅಶ್ವಿನಿ ಪ್ರಕರಣ ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಗೆ ಎರಡು ದಿನಗಳ ಭೇಟಿ ವೇಳೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ ಕಾಣದಾಯಿತೇ ಎಂಬ ಪ್ರಶ್ನೆ ಸಾರ್ವಜನಿಕವಾಗಿ ಎಬ್ಬಿದೆ. ಎರಡು ಪ್ರಕರಣಗಳು ರಾಜಕೀಯ ಪಕ್ಷಗಳ ಒತ್ತಡಕ್ಕೆ ಬಲಿಯಾಯಿತೇ ಅನ್ನುವ ಪ್ರಶ್ನೆಯೂ ಸದ್ಯ ಜಿಲ್ಲೆಯಾದ್ಯಂತ ಮನೆಮಾಡಿದೆ.
ಈ ರೀತಿಯ ಗಂಭೀರ ಮತ್ತು ಮಾನವೀಯತೆಗೂ ಸಂಬಂಧಿಸಿದ ಪ್ರಕರಣಗಳು ರಾಜ್ಯ ಮಹಿಳಾ ಆಯೋಗದ ಗಮನಕ್ಕೆ ಬಂದಿಲ್ಲವೇ? ಅಥವಾ ಬಂದಿದ್ದರೂ ಸೂಕ್ತ ಕ್ರಮಗಳು ಕೈಗೊಳ್ಳಲಾಗಿಲ್ಲವೇ? ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿರುವ ಡಾ. ನಾಗಲಕ್ಷ್ಮೀ ಚೌಧರಿ ಅವರು ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಈ ಪ್ರಕರಣಗಳ ಕುರಿತು ಯಾವುದೇ ಸ್ಪಷ್ಟ ಪ್ರತಿಕ್ರಿಯೆ ವ್ಯಕ್ತವಾಗದಿರುವುದು ಸಾರ್ವಜನಿಕರಲ್ಲಿ ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಇಡೀ ರಾಜ್ಯದ ಗಮನ ಸೆಳೆದ ಸೌಜನ್ಯಾ ಹತ್ಯೆ ಪ್ರಕರಣದ ವಿಚಾರದಲ್ಲಿಯೂ ನ್ಯಾಯ ಪ್ರಕ್ರಿಯೆ ನಿರಂತರವಾಗಿ ಚರ್ಚೆಗೆ ಗ್ರಾಸವಾಗುತ್ತಿದ್ದು, ವಿವಿಧ ಸಂಘಟನೆಗಳು ಮತ್ತು ಸಾರ್ವಜನಿಕರು ನ್ಯಾಯ ದೊರಕಬೇಕೆಂದು ಆಗಾಗ್ಗೆ ಆಗ್ರಹಿಸುತ್ತಲೇ ಇದ್ದಾರೆ. ಆದರೆ ಈ ಪ್ರಕರಣಗಳ ಬಗ್ಗೆ ಅಧಿಕಾರಿಗಳ ಮೌನವು ಹಲವರಲ್ಲಿ ಅನುಮಾನಗಳಿಗೆ ಕಾರಣವಾಗುತ್ತಿದೆ. ಈ ಎರಡು ಪ್ರಕರಣಗಳು ರಾಜಕೀಯ ಪಕ್ಷಗಳ ಒತ್ತಡಕ್ಕೆ ಬಲಿಯಾಗಿದೆಯೇ ಎಂಬ ಪ್ರಶ್ನೆಯೂ ಜಿಲ್ಲೆಯಾದ್ಯಂತ ಕೇಳಿಬರುತ್ತಿದೆ. ನ್ಯಾಯದ ನಿರೀಕ್ಷೆಯಲ್ಲಿರುವ ಕುಟುಂಬಗಳಿಗೆ ಸ್ಪಂದನೆ ನೀಡುವಲ್ಲಿ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಇನ್ನಷ್ಟು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕೆಂಬ ಆಗ್ರಹವನ್ನು ಸಾರ್ವಜನಿಕರು ವ್ಯಕ್ತಪಡಿಸುತ್ತಿದ್ದಾರೆ. ನ್ಯಾಯಕ್ಕಾಗಿ ಕಾದು ಕುಳಿತಿರುವವರ ನೋವು ಕೇವಲ ವೈಯಕ್ತಿಕವಾಗಿರದೇ, ಅದು ಸಮಾಜದ ನೈತಿಕ ಜವಾಬ್ದಾರಿಯನ್ನೂ ನೆನಪಿಸುತ್ತದೆ. ಆದ್ದರಿಂದ ಈ ರೀತಿಯ ಘಟನೆಗಳ ಕುರಿತು ಸೂಕ್ತ ತನಿಖೆ, ಸ್ಪಂದನೆ ಮತ್ತು ನ್ಯಾಯ ಒದಗಿಸುವಲ್ಲಿ ಸರ್ಕಾರ ಹಾಗೂ ಸಂಬಂಧಿತ ಆಯೋಗಗಳು ತಕ್ಷಣವೇ ಗಮನ ಹರಿಸಬೇಕೆಂಬ ಒತ್ತಾಯ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಪುತ್ತೂರು ಪ್ರಕರಣದಲ್ಲಿ ತೆರಳಿ ನ್ಯಾಯಯುತ ಮಾತುಗಳನ್ನಾಡಿರುವ ಡಾ. ನಾಗಲಕ್ಷ್ಮೀ ಚೌಧರಿ ಅವರಿಗೆ 43 ಕಿ.ಮೀ ದೂರದಲ್ಲಿರುವ ಸೌಜನ್ಯ ಮನೆ ಕಾಣದಾಯಿತೇ ಹಾಗೆಯೇ ಉಳ್ಳಾಲ ತಾಲೂಕಿನ ಮಡ್ಯಾರ್ ವಿದ್ಯಾರ್ಥಿನಿ ವಸತಿ ನಿಲಯಕ್ಕೆ ರಾತ್ರೋರಾತ್ರಿ ಭೇಟಿ ನೀಡಿ ವಿದ್ಯಾರ್ಥಿನಿಯರ ಜೊತೆಗೆ ಸಂವಾದ ನಡೆಸಿ ಅವರ ಜೊತೆಗೆ ಊಟ ಮುಗಿಸಿ ವಾಪಸ್ಸು ತೆರಳಿದರೂ, 6-7 ಕಿ.ಮೀ ದೂರದಲ್ಲಿನ ಹರೇಕಳದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡು ಹಲವು ತಿಂಗಳುಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿರುವ ಗುಡ್ಡ ಕುಸಿತದ ಸಂತ್ರಸ್ತೆ ಅಶ್ವಿನಿ ಪ್ರಕರಣದ ಕುರಿತು ಮನೆಗೆ ಭೇಟಿ ನೀಡುವಷ್ಟು ಸೌಜನ್ಯವೇ ಇಲ್ಲದಾಯಿತೇ?. ತನ್ನ ಭೇಟಿಯ ಕುರಿತು ಸುದ್ಧಿಗೋಷ್ಠಿ ನಡೆಸಿ ಎಲ್ಲಾ ವಿಚಾರಗಳನ್ನು ಸಾರ್ವಜನಿಕರ ಗಮನಕ್ಕೆ ತಂದರೂ, ಜಿಲ್ಲೆಯ ಜನರಲ್ಲಿ ಈಗಲೂ ಕಣ್ಣೀರು ತರಿಸುವಂತಹ ಎರಡು ಪ್ರಕರಣಗಳ ಗಂಭೀರತೆ ಅರಿಯದೇ ಹೋಗಿರುವುದು ಪ್ರಬುದ್ಧ ನಾಗರಿಕರಲ್ಲಿ ಅಸಮಧಾನವನ್ನುಂಟು ಮಾಡಿದೆ.


