ಕಾಸರಗೋಡು, ಫೆ. 21 : ಬದಿಯಡ್ಕದ ನೆಲ್ಲಿಕಟ್ಟೆ ಬಳಿ ಇಂದು ಮುಂಜಾನೆ ಕಾರು ಮತ್ತು ಕರ್ನಾಟಕ ಕೆಎಸ್ ಆರ್ ಟಿಸಿ ಬಸ್ ಪರಸ್ಪರ ಬಡಿದು ಸಂಭವಿಸಿದ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ಮೃತಪಟ್ಟು, ಸಹ ಪ್ರಯಾಣಿಕ ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ನೆಲ್ಲಿಕಟ್ಟೆ ಸಂಶುದ್ದೀನ್ (68) ಮೃತ ವ್ಯಕ್ತಿಯಾಗಿದ್ದಾರೆ. ಇವರ ಮಗ ಸಲ್ಮಾನ್ ಹಾರಿಸ್(22)ಎಂಬವರು ಗಂಭೀರ ಗಾಯಗೊಂಡಿದ್ದು, ಕಾಸರಗೋಡು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮುಂಜಾನೆ ಆರು ಗಂಟೆಗೆ ಬದಿಯಡ್ಕ ಠಾಣಾ ವ್ಯಾಪ್ತಿಯ ಕೆಳಗಿನ ನೆಲ್ಲಿಕಟ್ಟೆಯಲ್ಲಿ ಅಪಘಾತ ಸಂಭವಿಸಿದೆ.ಕಾಸರಗೋಡಿನಿಂದ ಪುತ್ತೂರಿಗೆ ಹೋಗುತ್ತಿದ್ದ ಬಸ್ ಮತ್ತು ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ಸಾಗುತ್ತಿದ್ದ ಕಾರು ಪರಸ್ಪರ ಬಡಿದು ದುರ್ಮರಣ ಸಂಭವಿಸಿದೆ.
ಅಪಘಾತದಲ್ಲಿ ಕಾರು ನಜ್ಜುಗುಜ್ಜಾಗಿದೆ. ಗಂಭೀರ ಗಾಯಗೊಂಡ ತಂದೆ ಮಗ ಇಬ್ಬರನ್ನೂ ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಷಂಸುದ್ದೀನ್ ಮೃತಪಟ್ಟಿದ್ದಾರೆ.



