ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ವಾಹನ ಸವಾರರಿಗೆ ಅನುಕೂಲವಾದರೂ, 400 ಮನೆ, ಶಾಲೆ, ದೇವಸ್ಥಾನ, ಮಸೀದಿ ಸಂಪರ್ಕ ಕಡಿತವಾಗಿದೆ. ಸ್ಥಳೀಯರು ಪಾದಚಾರಿ ಗೇಟ್ ಮತ್ತು ಆಂಬುಲೆನ್ಸ್ ದಾರಿಗೆ ಆಗ್ರಹಿಸಿದ್ದಾರೆ.

ಮಂಗಳೂರು ನಗರದ ಮಹಾಕಾಳಿಪಡ್ಪು ಪ್ರದೇಶದಲ್ಲಿ ರೈಲ್ವೆ ಅಂಡರ್ ಪಾಸ್ ಬೇಕೆಂಬ ಕೂಗಿಗೆ ಫಲ ದೊರಕಿದೆ. ಅಂಡರ್ ಪಾಸ್ ವಾಹನ ಸವಾರರಿಗೆ ದೊಡ್ಡಮಟ್ಟದ ಅನುಕೂಲ ಒದಗಿಸಿದರೂ, ಸ್ಥಳೀಯ ನಿವಾಸಿಗಳನ್ನು ಸಂಕಷ್ಟಕ್ಕೆ ತಳ್ಳಿದೆ. ರೈಲ್ವೆ ಅಂಡರ್ ಪಾಸ್ ಸಂಚಾರ ಮುಕ್ತಗೊಂಡ ದಿನವೇ ಇಲ್ಲಿನ ರೈಲ್ವೆ ಗೇಟನ್ನು ಕಾಂಕ್ರೀಟ್ ತಡೆಗೋಡೆ ನಿರ್ಮಿಸಿ ಸಂಪೂರ್ಣವಾಗಿ ಮುಚ್ಚಲಾಗಿದೆ. ಪ್ರತಿ ದಿನ ಈ ಹಳಿಯಲ್ಲಿ 40-50ರೈಲುಗಳು ಸಂಚಾರ ನಡೆಸುತ್ತಿರುತ್ತದೆ. ಆದ್ದರಿಂದ ಇಲ್ಲಿ 45 ವರ್ಷಗಳಿಂದ ರೈಲ್ವೆ ಗೇಟ್ ಕಾರ್ಯ ನಿರ್ವಹಿಸುತ್ತಿತ್ತು. ಇದರಿಂದ ಕೇರಳ, ತಲಪಾಡಿ, ತೊಕ್ಕೊಟ್ಟು, ಉಳ್ಳಾಲ ಕಡೆಗಳಿಂದ ಮಂಗಳೂರು ನಗರವನ್ನು ಸಂಪರ್ಕಿಸುವ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು.
ಅಂಡರ್ ಪಾಸ್ ನಿಂದ ಅನಾನುಕೂಲ
ಇದೀಗ ಅಂಡರ್ ಪಾಸ್ ಸಂಚಾರ ಮುಕ್ತದ ಬಳಿಕ ಹಳೆಯ ರೈಲ್ವೆ ಗೇಟ್ ಬಂದ್ ಮಾಡಿ ಹಳಿ ದಾಟಿ ನಡೆದುಕೊಂಡು ಹೋಗುತ್ತಿದ್ದ ದಾರಿಯನ್ನೂ ಕೆಡವಿ ಹಾಕಲಾಗಿದೆ. ತಡೆಗೋಡೆ ನಿರ್ಮಿಸಿ, ಗುಂಡಿ ತೋಡಿ ದಾರಿ ಮುಚ್ಚಲಾಗಿದೆ. ಪರಿಣಾಮ ರೈಲ್ವೆ ಹಳಿಯ ಅತ್ತಕಡೆಯ ಸುಮಾರು 400ಮನೆಗಳಿಗೆ, ಒಂದು ಸರಕಾರಿ ಶಾಲೆ, ಎರಡು ದೇವಸ್ಥಾನಗಳು, ಒಂದು ಮಸೀದಿಗೆ ಸಂಪರ್ಕ ರಸ್ತೆಯೇ ಕಡಿದುಕೊಂಡಂತಾಗಿದೆ. ತುರ್ತು ಸಂದರ್ಭ ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳ ಸಂಚಾರಕ್ಕೂ ತೊಡಕಾಗಲಿದೆ.
ನೀರು ನಿಲ್ಲುವ ಭೀತಿ..!!
ನೂತನ ಅಂಡರ್ ಪಾಸ್‍ನ ತಳಭಾಗ ಗುಂಡಿಯಾಗಿದ್ದರಿಂದ ಮಳೆಗಾಲದಲ್ಲಿ ನೀರು ನಿಲ್ಲುವ ಭೀತಿಯಿದೆ. ಇದರಿಂದ ವಾಹನ ಸವಾರರಿಗೆ, ಸ್ಥಳೀಯ ನಿವಾಸಿಗಳಿಗೆ ರಸ್ತೆ ಸಂಪರ್ಕಕ್ಕೆ ತೊಂದರೆಯಾಗಲಿದೆ. ಆದ್ದರಿಂದ ರೈಲ್ವೆ ಕ್ರಾಸಿಂಗ್ ಉಳಿಸುವಂತೆ ಅಧಿಕಾರಿಗಳಿಗೆ, ಸಂಸದರಿಗೆ, ಶಾಸಕರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.

