ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾ ಹಾಗೂ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಉರ್ವಾ ಚರ್ಚೆ ಮೈದಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಧ್ವಜಾರೋಹಣ ನೆರವೇರಿಸಿದ ಚರ್ಚ್ ನ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಮ್ಯಾಕ್ಸಿಮ್ ಕ್ಯಾಸ್ಟಲಿನೊ ಅವರು ಮಾತನಾಡಿ, “ವಿದ್ಯಾರ್ಥಿಗಳು ದೇಶಪ್ರೇಮ, ಶಿಸ್ತು ಮತ್ತು ತ್ಯಾಗ ಮನೋಭಾವವನ್ನು ರೂಢಿಸಿಕೊಂಡು ತಮ್ಮ ಕೊಡುಗೆಯನ್ನು ದೇಶಕ್ಕೆ ಸಲ್ಲಿಸಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಸಂಚಾಲಕರು ಹಾಗೂ ಉರ್ವಾ ಇಮ್ಯಾಕ್ಯುಲೇಟ್ ಚರ್ಚ್ ಧರ್ಮಗುರು ವಂ. ಗುರು ಬೆಂಜಮಿನ್ ಪಿಂಟೊ, ಉರ್ವಾ ಚರ್ಚ್ ಪಾಲನಾ ಮಂಡಳಿಯ ಸದಸ್ಯರು, ಉಭಯ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಾಲಾ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರು ಉಪಸ್ಥಿತರಿದ್ದರು.
2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನ ಗಳಿಸಿದ 4 ವಿದ್ಯಾರ್ಥಿಗಳನ್ನು ಹಾಗೂ ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಶಾಲೆಯನ್ನು ಪ್ರತಿನಿಧಿಸಿದ ವಿದ್ಯಾರ್ಥಿಗಳನ್ನು ಶಾಲೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಸಂತ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ ಉರ್ವಾದ ವಿದ್ಯಾರ್ಥಿನಿ ಜೈನ್ ಜೆರುಶಾ ಪಿಂಟೊ ಅವರು ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು. ಸಂತ ಅಲೋಶಿಯಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಪ್ರಮೀಳಾ ಡಿಸಿಲ್ವಾ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಶಿಕ್ಷಕರಾದ ರವಿಶಂಕರ್ ಎಂ.ಕೆ. ಮತ್ತು ರೋಶನಿ ಡಿಸೋಜ ಅವರು ಸಾಧಕರ ಪಟ್ಟಿಯನ್ನು ವಾಚಿಸಿದರು. ಶಿಕ್ಷಕಿ ಐಸಿ ಮರಿಯಾ ಡಿಸೋಜಾ ಅವರು ವಂದಿಸಿದರು. ಶಿಕ್ಷಕಿ ವಿನೀತ ಡಿಕೋಸ್ಟ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಹಾಗೂ ಕವಾಯತು ಪ್ರದರ್ಶನ ನಡೆಯಿತು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡಿತು.

