ಬೆಳ್ತಂಗಡಿ,ಫೆ. 10 : ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ವಿದ್ಯಾರ್ಥಿನಿ ಅಪಹರಣ ಯತ್ನ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ದೂರಿನಲ್ಲಿ ಉಲ್ಲೇಖಿಸಲಾದ ಯಾವುದೇ ವಾಹನ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ವೈದ್ಯಕೀಯ ಪರೀಕ್ಷೆಯಲ್ಲಿ ಪ್ರಥಮವಾಗಿ ಇದು ಸ್ವಯಂ ಉಂಟು ಮಾಡಿಕೊಂಡ ಗಾಯ ಎಂದು ತಿಳಿಸಲಾಗಿತ್ತು. ನಂತರ ಬಾಲಕಿಯ ಹೇಳಿಕೆಯನ್ನು ಮತ್ತೊಮ್ಮೆ ದಾಖಲಿಸಲಾಗಿದ್ದು, ಈ ಘಟನೆ ಕುರಿತು ತಾನು ಸುಳ್ಳು ಹೇಳಿಕೆ ನೀಡಿರುವುದಾಗಿ ಆಕೆ ಒಪ್ಪಿಕೊಂಡಿದ್ದಾಳೆ.ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯ ಹಿತದೃಷ್ಠಿಯಿಂದ ಘಟನೆಯನ್ನು ಸೂಕ್ಷ್ಮವಾಗಿ ಪರಿಗಣಿಸಿ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ (CDPO) ಅವರಿಂದ ಬಾಲಕಿಗೆ ಕೌನ್ಸೆಲಿಂಗ್ ನೀಡಲಾಗುವುದು ಹಾಗೂ ಮುಂದಿನ ಕಾನೂನು ಕ್ರಮವನ್ನು ನಿರ್ಧರಿಸಲಾಗುವುದು. ಎಂದು ತಿಳಿಸಿದ್ದಾರೆ.ಅಪ್ರಾಪ್ತೆಗೆ ಚಲಾಯಿಸಲು ವಾಹನ ನೀಡಿರುವ ಕುರಿತು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.ಬೆಳ್ತಂಗಡಿ ನಗರದ ಸುದೇಮುಗೇರು ಎಂಬಲ್ಲಿ ಫೆ.9ರಂದು ಬೆಳಗ್ಗೆ 8:30ರ ಸುಮಾರಿಗೆ 16 ವರ್ಷದ ಕಾಲೇಜು ವಿದ್ಯಾರ್ಥಿನಿ ಸ್ಕೂಟರ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಮೂವರು ಅಪಹರಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿತ್ತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ದುಷ್ಕರ್ಮಿಗಳು ತನ್ನ ಕೈಗೆ ಚೂರಿಯಿಂದ ಚುಚ್ಚಿ ಪರಾರಿಯಾದರು ಎಂದು ವಿದ್ಯಾರ್ಥಿನಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಳು. ಕೈಗೆ ಗಾಯವಾಗಿದ್ದರಿಂದ ಬಾಲಕಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.



