ಉಳ್ಳಾಲ: ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು, ಮಂಜನಾಡಿ ಇದರ ಆಶ್ರಯದಲ್ಲಿ ಹಾಗೂ ಭಾರತ ಸರ್ಕಾರದ ಆಯುಷ್ ಸಚಿವಾಲಯದ ಅಧೀನದಲ್ಲಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಸ್ಥೂಲಕಾಯ ನಿರ್ವಹಣೆಗೆ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕಾರ್ಯಕ್ರಮವನ್ನು ಫೆ.6ರಿಂದ ಫೆ.25ರವರೆಗೆ ಮಂಜನಾಡಿಯ ಯೆನೆಪೋಯ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ ಎಂದು ಯೆನೆಪೋಯ ನ್ಯಾಚುರೋಪತಿ ಆ್ಯಂಡ್ ಯೋಗ ಸೈನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ಪ್ರಿನ್ಸಿಪಾಲ್ ಡಾ.ಪುನೀತ್ ತಿಳಿಸಿದ್ದಾರೆ.

ಉಳ್ಳಾಲ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಯೋಗಾಭ್ಯಾಸ, ಪ್ರಕೃತಿ ಚಿಕಿತ್ಸಾ ವಿಧಾನಗಳು, ಆಹಾರ ನಿಯಂತ್ರಣ ಮತ್ತು ಜೀವನಶೈಲಿ ಪರಿವರ್ತನೆಯ ಮೂಲಕ ಸ್ಥೂಲಕಾಯದ ಸಮಗ್ರ, ಸುರಕ್ಷಿತ ಹಾಗೂ ಸಹಜ ನಿರ್ವಹಣೆಯನ್ನು ಪರಿಣಿತ ವೈದ್ಯರ ಮಾರ್ಗದರ್ಶನದಲ್ಲಿ ಒದಗಿಸುವ ಉದ್ದೇಶವನ್ನು ಹೊಂದಿದೆ ಎಂದರು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿ ಪ್ರಮಾಣಾಧಾರಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳು, ಔಷಧ ರಹಿತ ಹಾಗೂ ಸಹಜ ತೂಕ ನಿಯಂತ್ರಣ ಕ್ರಮಗಳು ಮತ್ತು ಅನುಭವಿ ಹಾಗೂ ಅರ್ಹ ವೈದ್ಯರಿಂದ ಮಾರ್ಗದರ್ಶನ ಲಭ್ಯವಾಗಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮವು ಸ್ಥೂಲಕಾಯದ ಸಹಜ ಹಾಗೂ ಸಮಗ್ರ ನಿರ್ವಹಣೆಯನ್ನು ಬಯಸುವ ಎಲ್ಲ ಆಸಕ್ತರಿಗೆ ಮುಕ್ತವಾಗಿದೆ. ಆಸನಗಳ ಸಂಖ್ಯೆ ಸೀಮಿತವಾಗಿರುವುದರಿಂದ ಆಸಕ್ತರು ತ್ವರಿತವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಫೆಬ್ರವರಿ 21 ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು.
ಈ ಕಾರ್ಯಕ್ರಮದ ಅಂಗವಾಗಿ, ಸ್ಥೂಲಕಾಯ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಫೆಬ್ರವರಿ 14ರಂದು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದರ ಜೊತೆಗೆ, ಸಾಮಾನ್ಯ ಜನರಿಗಾಗಿ ಸ್ಥೂಲಕಾಯ ಹಾಗೂ ಅದರೊಂದಿಗೆ ಸಂಬAಧಿಸಿದ ಆರೋಗ್ಯ ಸಮಸ್ಯೆಗಳು, ಅವುಗಳ ತಡೆ ಮತ್ತು ನಿರ್ವಹಣೆ ಕುರಿತು ಒಂದು ದಿನದ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಯೋಜಕಿ ಡಾ. ಪದ್ಮಶ್ರೀ, ಡಾ. ವಜ್ರಾಕ್ಷಿ ಹಾಗೂ ಕ್ಯಾಂಪ್ ಮುಖ್ಯಸ್ಥ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು



