ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಸುಪ್ರಿಯಾ ಆರೋಗ್ಯ ಸ್ಥಿತಿಯ ಮತ್ತು ಚಿಕಿತ್ಸೆಗೆ ದಾನಿಗಳ ಮೊರೆ ಕೇಳಿ ಉಳ್ಳಾಲ್ ನ್ಯೂಸ್.ಕಾಂ ಮೊದಲ ವರದಿ ಮಾಡಿತ್ತು. ಇದಕ್ಕೆ ಸ್ಪಂಧಿಸಿದ ನಮ್ಮ ಕುಂಬ್ಳೆ ವಾಟ್ಸ್ಯಾಪ್ ಗ್ರೂಪ್ ನ ಯುವಕರ ತಂಡ ವೆಬ್ ಸೈಟಿನಲ್ಲಿ ಪ್ರಕಟವಾದ ಭಾವಚಿತ್ರವನ್ನು ಗ್ರೂಪಿನ ಪ್ರೊಫೈಲ್ ಫೋಟೊ ಆಗಿ ಬಳಸಿಕೊಂಡು ವರದಿಯನ್ನು ಷೇರ್ ಮಾಡಿ ದಾನಿಗಳ ಗಮನ ಸೆಳೆದಿದ್ದರು.
ಲಿವರಿನ ತೊಂದರೆಗೊಳಗಾದ ಕುತ್ತಾರು ಮುಂಡೋಳಿಯ ಸುಪ್ರಿಯಾಳ ಚಿಕಿತ್ಸೆ ವೆಚ್ಚಕ್ಕೆ ಒಂದು ತಿಂಗಳ ಕಾಲ ಗುಂಪಿಗೆ ಹಲವರನ್ನು ಸೇರಿಸಿಕೊಂಡು ಅವರಿಂದ ಪಡಕೊಂಡ ಹಣವನ್ನು ಒಟ್ಟುಗೂಡಿಸಿ ಇದೀಗ ರೂ. 1,33,000 ಹಣವನ್ನು ಸಂಗ್ರಹಿಸಿ ಸುಪ್ರಿಯಾಳಿಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆಯೂ ` ಸೈಕಲಿನಿಂದ ಬಿದ್ದು ಹಾಸಿಗೆ ಹಿಡಿದ ಬಾಲಕ’ ಎಂಬ ಶೀರ್ಷಿಕೆಯಡಿ ಸುಭಾಷನಗರದ ಪುನೀತ್ ಮಾನವೀಯ ವರದಿಗೂ ದಾನಿಗಳು ಸ್ಪಂಧಿಸಿದ್ದಾರೆ.
ನಮ್ಮ ಕುಂಬಳೆ ವಾಟ್ಸ್ಯಾಪ್ ಗ್ರೂಪ್ ಅನ್ನುವ ಪ್ರಮುಖ ಗ್ರೂಪಿನ ಜತೆಗೆ ವಾಟ್ಸ್ಯಾಪ್ ಗ್ರೂಪ್ ಮೆಂಬರ್ಸ್, ಗಟ್ಟಿ ಬ್ರದರ್ಸ್ ಗ್ರೂಪ್ ಮೆಂಬರ್ಸ್, ಕೂಡ್ಲು ಗೋಪಾಲಕೃಷ್ಣ ಸ್ಕೂಲ್ ಸ್ಟೂಡೆಂಟ್ಸ್, ಕುಂಬಳೆ ದೇವಿನಗರ ಗಟ್ಟಿ ಗಲ್ರ್ಸ್, ` ಗಟ್ಟಿ ಬ್ರದರ್ಸ್ ಹೆಲ್ ಮಲ್ಪುಲೆ’ ಅನ್ನುವ ಹೆಸರಿನೊಂದಿಗೆ ವಿವಿಧ ಗುಂಪುಗಳನ್ನು ಜೋಡಿಸಿಕೊಂಡು ಸುಪ್ರಿಯಾಳ ಚಿಕಿತ್ಸೆಗೆ ಹಣವನ್ನು ಸಂಗ್ರಹಿಸಿದೆ. ಒಂದು ತಿಂಗಳ ಅವಧಿಯಲ್ಲಿ ದೇಶ-ವಿದೇಶಗಳಲ್ಲಿರುವ ದಾನಿಗಳು ಈ ಗ್ರೂಪಿನ ಉತ್ತಮ ಕೆಲಸಕ್ಕೆ ಸ್ಪಂಧಿಸಿ ಅಕೌಂಟಿಗೆ ರೂ.500, 1,000, 5,000 ಮತ್ತು 10,000 ಹೀಗೆ ಹಣ ಹಾಕುತ್ತಾ ಬಂದಿದೆ. ತಿಂಗಳ ಅವಧಿಯಲ್ಲಿ ರೂ. 1,33,000 ಹಣವನ್ನು ಒಟ್ಟುಗೂಡಿಸಿ ಶನಿವಾರ ಸುಪ್ರಿಯಾಳ ಮುಂಡೋಳಿ ನಿವಾಸಕ್ಕೆ ಭೇಟಿ ನೀಡಿ ಆಕೆಗೆ ಹಸ್ತಾಂತರಿಸಿದ್ದಾರೆ. ಇದು ನಮ್ಮ ಕುಂಬಳೆ ವಾಟ್ಸ್ಯಾಪ್ ಗ್ರೂಪ್ ನ ಯುವಕರ ಎರಡನೇ ದೇಣಿಗೆಯಾಗಿದ್ದು, ಹಿಂದೆ ರಕ್ತದ ಕ್ಯಾನ್ಸರಿನಿಂದ ಬಳಲುತ್ತಿದ್ದ ಬಾಲಕಿಯೋರ್ವಳ ಚಿಕಿತ್ಸೆಗೆ ರೂ.80,000 ಹಣವನ್ನು ಸಂಗ್ರಹಿಸಿ ನೀಡಿತ್ತು.
ಬಿ.ಕಾಂ ಪದವೀಧರೆ ಸುಪ್ರಿಯಾ ಕಾಲೇಜು ಮುಗಿಸಿದ ನಂತರ ಲಿವರಿನ ತೊಂದರೆಗೊಳಗಾಗಿ ಅಸೌಖ್ಯಕ್ಕೀಡಾಗಿದ್ದಳು. ಬಳಿಕ ವೈದ್ಯರ ವರದಿಯಂತೆ ಲಿವರಿನ ಕಸಿ ಕ್ರಿಯೆ ನಡೆಸಿದಲ್ಲಿ ಸುಪ್ರಿಯಾಳ ಜೀವ ಉಳಿಸಬಹುದು ಅನ್ನುವ ಸಲಹೆಯನ್ನು ನೀಡಿದ್ದರು. ಇದರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬ ಕಂಗೆಟ್ಟು ಹೋಯಿತು. ಆದರೂ ಸಹೋದರ ಮಧುಸೂದನ್ ಅವರು ಎದುರು ನಿಂತು ಸಹೋದರಿಯನ್ನು ಹೇಗಾದರೂ ಉಳಿಸಬೇಕು ಅನ್ನುವ ದೃಷ್ಟಿಯಿಂದ ದಿನಗೂಲಿ ಕೆಲಸ ನಿರ್ವಹಿಸಿ, ಸಾಲವನ್ನು ಮಾಡಿ ಈವರೆಗೆ ರೂ. 10 ಲಕ್ಷದಷ್ಟು ಚಿಕಿತ್ಸೆಗೆ ವ್ಯಯಿಸಿದ್ದಾರೆ. ಹೊಟ್ಟೆಯಿಂದ ನೀರು ಹೊರತೆಗೆಯಲು ಮತ್ತು ಚಿಕಿತ್ಸೆಗೆ ಈವರೆಗೆ ಹಣವನ್ನು ಖರ್ಚು ಮಾಡಿರುವ ಕುಟುಂಬ ಮುಂದೆ ಶಸ್ತ್ರಚಿಕಿತ್ಸೆಗೆ ರೂ. 45 ಲಕ್ಷ ಹಣ ಬೇಕಾಗಿರುವುದರಿಂದ ದಾನಿಗಳ ಮೊರೆ ಹೋಗಿದ್ದರು. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಯನ್ನು ನೋಡಿ ಹಲವು ಸಂಘ ಸಂಸ್ಥೆಗಳು ಪ್ರತಿಕ್ರಿಯಿಸಿ ಸುಪ್ರಿಯಾಳ ಕುಟುಂಬಕ್ಕೆ ಈವರೆಗೆ ರೂ. 2 ಲಕ್ಷದಷ್ಟು ಹಣವನ್ನು ದಾನವನ್ನಾಗಿ ನೀಡಿದೆ. ಇದೀಗ ವಾಟ್ಸ್ಯ್ಪ್ ಗ್ರೂಪ್ ನೀಡಿರುವ ಮೊತ್ತದೊಂದಿಗೆ ರೂ.3 ಲಕ್ಷ ಹಣ ಸಂಗ್ರಹವಾಗಿದೆ. ಇನ್ನೂ ಶಸ್ತ್ರಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿರುವುದರಿಂದ ಸಹೃದಯೀ ದಾನಿಗಳು ಮನಸ್ಸು ಮಾಡಬೇಕಿದೆ ಅನ್ನುವ ಅಭಿಪ್ರಾಯ ವಾಟ್ಸ್ಯ್ಪ್ ತಂಡದ್ದಾಗಿದೆ


