ತಲಪಾಡಿ; ತಲಪಾಡಿಯಿಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕಡೆ ಹೋಗುವ ರಸ್ತೆಯ ಸಮೀಪವಿರುವ ನಾರ್ಲ ಪಡೀಲ್ ಪಶು ಆಸ್ಪತ್ರೆ ಬಳಿ ಘನ ತ್ಯಾಜ್ಯ ಘಟಕವನ್ನು ತಲಪಾಡಿ ಗ್ರಾಮ ಪಂಚಾಯತ್ ನಿರ್ಮಾಣ ಮಾಡುವ ಯೋಜನೆಗೆ ಮುಂದಾಗಿದ್ದು, ಇದರಿಂದ ಸಾರ್ವಜನಿಕರ ಆರೋಗ್ಯ, ಪರಿಸರ ಮತ್ತು ಮಕ್ಕಳ ಭವಿಷ್ಯಕ್ಕೆ ಗಂಭೀರ ಹಾನಿ ಉಂಟುಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿ ಸ್ಥಳೀಯರು ನಾರ್ಲ ಪಡೀಲ್ ಪಶು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸಿದ್ದಾರೆ.

ಈ ವೇಳೆ ಸ್ಥಳೀಯರಾದ ಯಶು ಪಕ್ಕಳ ಮಾತನಾಡಿ, ಈ ಪ್ರದೇಶದಲ್ಲಿ ಕೇವಲ ಎರಡು ಮೂರು ಮನೆಗಳ ಸಹಿ ಹಾಕಿಸಿಕೊಂಡು ಕಾರ್ಖಾನೆಗಳು ತಲೆ ಎತ್ತಿನಿಂತಿದೆ. ಇದೀಗ ಕಸ ವಿಲೇವಾರಿ ಘಟಕ ನಿರ್ಮಾಣವಾದರೆ ಪರಿಸರದ ಜೊತೆಗೆ ಸಾರ್ವಜನಿಕರು ಸಂಕಷ್ಟವನ್ನು ಎದುರಿಸಬೇಕಾದೀತು. ಅದಲ್ಲದೇ ಘಟಕಕ್ಕೆ ಬೇಲಿ ನಿರ್ಮಿಸುವುದರ ಮೂಲಕ ಭದ್ರತೆ ಮಾಡಿದ್ರೂ, ಇದೇ ಪ್ರದೇಶದಲ್ಲಿ ಗಾಂಜಾ ಅಥವಾ ಇನ್ನಿತರ ಅಕ್ರಮ ಚಟುವಟಿಕೆಗಳನ್ನು ನಡೆಯುವ ಸಾಧ್ಯತೆ ಇದೆ. ಅಂಗನವಾಡಿ ಕೇಂದ್ರ, ಪಶು ಆಸ್ಪತ್ರೆ ವಿರುವ ತಾಣದಲ್ಲಿ ಕಸ ವಿಲೇವಾರಿ ಘಟಕ ಇರೋದಿಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ನಿಂತು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳೋಣ ಅಂತ ಹೇಳಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ತಲಪಾಡಿ ಗ್ರಾಮ ಪಂಚಾಯತ್ ಕಾರ್ಯದರ್ಶಿಯಾದ ಮಂಜಪ್ಪ ಅಗಮಿಸಿದ್ದು, ಅವರಿಗೆ ಸ್ಥಳೀಯರು ಮನವಿಯನ್ನು ಸಲ್ಲಿಸಿದ್ದಾರೆ. ಕಸ ತ್ಯಾಜ್ಯವಿಲೇವಾರಿ ಘಟಕವನ್ನು ತಲಪಾಡಿ ಗ್ರಾಮದ ಬೇರೆ ಪ್ರದೇಶಗಳಲ್ಲಿ ಸ್ಥಾಪಿಸಲು ಸಾಕಷ್ಟು ಸ್ಥಳಾವಕಾಶವಿದ್ದರೂ ಈ ಘಟಕವನ್ನು ನಾರ್ಲ ಪಡೀಲ್ ಶಾಲೆಯ ಬಳಿ ಸ್ಥಾಪಿಸಲು ತಲಪಾಡಿ ಗ್ರಾಮ ಪಂಚಾಯತ್ ಎಲ್ಲಾ ರೀತಿಯ ತಯಾರಿಯನ್ನು ನಡೆಸಿರುವುದು ಖಂಡನೀಯ. ಈ ಪ್ರದೇಶವು ಜನವಸತಿ ಪ್ರದೇಶವಾಗಿದ್ದು ಹಾಗೂ ದಿನಂಪ್ರತಿ ನೂರಾರು ಜನರು ಸಂಚರಿಸುವ ಮಾರ್ಗವನ್ನು ಹೊಂದಿದ್ದು ಮತ್ತು ಸಮೀಪದಲ್ಲಿ ಶಾಲೆ ಕೂಡ ಇದೇ ಹಾಗಾಗಿ ಈ ಪ್ರದೇಶದಲ್ಲಿ ಘಟಕ ನಿರ್ಮಿಸುವ ವಿಚಾರವನ್ನು ಹಿಂಪಡೆಯುವAತೆ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮನವಿ ಸ್ವೀಕರಿಸಿ ಮಾತನಾಡಿದ ಕಾರ್ಯದರ್ಶಿ ಅವರು, ಘನ ತ್ಯಾಜ್ಯ ಘಟಕದ ನಿರ್ಮಾಣಕ್ಕೆ ಕೇವಲ ಜಾಗದ ಗುರುತನ್ನು ಹಾಕಿದ್ದೇವೆ. ನಿರ್ಮಿಸುವುದರ ಬಗ್ಗೆ ಚರ್ಚೆಯಾಗಬೇಕಷ್ಟೇ. ಇದೀಗ ಘನ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು ಗ್ರಾಮ ಪಂಚಾಯತಿಯ ಘಟಕವಿದ್ದರೇ ಉತ್ತಮ ಎಂಬ ಕಲ್ಪನೆಯಲ್ಲಿ ನಿರ್ಮಾಣಕ್ಕೆ ಮುಂದಾಗಿದೆ. ತ್ಯಾಜ್ಯಗಳನ್ನು ವರ್ಷಾನುಗಟ್ಟನೆ ಇಡುವುದಿಲ್ಲ. ವಾರದಲ್ಲಿ ಒಮ್ಮೆ ಶಂಭೂರು ಘಟಕಕ್ಕೆ ಇಲ್ಲಿನ ತ್ಯಾಜ್ಯಗಳನ್ನು ಕೊಂಡೊಯ್ಯಲು ವಾಹನಗಳು ಬರುತ್ತವೆ. ಈ ಬಗ್ಗೆ ಗ್ರಾಮ ಸಭೆ ನಡೆಸಿ ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಿಸುತ್ತೇವೆ ಎನ್ನುತ್ತಾಲೇ, ಸ್ಥಳೀಯರು, ಯಾವುದೇ ಗ್ರಾಮ ಸಭೆ, ಚರ್ಚೆಯ ಅಗತ್ಯವಿಲ್ಲ. ನಾವು ಇಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಅವಕಾಶವನ್ನು ಮಾಡಿಕೊಡುವುದಿಲ್ಲ ಎಂದೇ ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ. ಬಳಿಕ ಕಾರ್ಯದರ್ಶಿಗಳು ವಾಪಾಸ್ಸಾದರು. ಮುಂದಿನ ದಿನಗಳಲ್ಲಿ ಈ ವಿಚಾರವಾದ ಬೆಳವಣಿಗೆಗಳು ಎತ್ತ ಸಾಗುತ್ತವೆ ಎಂಬುವುದನ್ನು ಕಾದು ನೋಡಬೇಕಾಗಿದೆ.

ಇನ್ನು ಈ ಪ್ರತಿಭಟನೆಯಲ್ಲಿ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ವೈಭವ್ ಶೆಟ್ಟಿ, ಪ್ರಶಾಂತ್, ಶ್ರೀರಾಮ ಭಜನಾ ಮಂಡಳಿಯ ಅಧ್ಯಕ್ಷ ಸುದೀಪ್ ಶೆಟ್ಟಿ ನಾರ್ಲ, ರಾಜೇಶ್ ಕೊಟ್ಟಾರಿ, ರಿಕ್ಷಾ ಚಾಲಕ-ಮಾಲಕರ ಸಂಘದ ಪದಾಧಿಕಾರಿಗಳು ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.



