ಬೆಂಗಳೂರು, ಜ. 12 : ಕೇರಳ ಸರ್ಕಾರದ ವಿರುದ್ಧ ಕನ್ನಡ ಪರ ಹೋರಾಟಗಾರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಕೇರಳ ಮಸೂದೆ ವಿರೋಧಿಸಿ ವಾಟಾಳ್ ನಾಗರಾಜ್ ರಾಜಭವನ ಮುತ್ತಿಗೆಗೆ ಯತ್ನಿಸಿದ್ದಾರೆ.
ರಾಜ್ಯದ ಗಡಿಯಲ್ಲಿರುವ ಕಾಸರಗೋಡು ಪ್ರದೇಶದಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಕೇರಳ ಸರ್ಕಾರದ ಮಸೂದೆಗೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕೇರಳ ಸರ್ಕಾರದ ಕ್ರಮವನ್ನು ಖಂಡಿಸಿದ್ದು, ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಇಳಿದಿವೆ.ಕೇರಳ ಸರ್ಕಾರದ ಮಸೂದೆ ವಿರೋಧಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ರಾಜಭವನ ಮುತ್ತಿಗೆಗೆ ಯತ್ನ ನಡೆದಿದ್ದು, ಪ್ರತಿಭಟನಾಕಾರರನ್ನು ಪೊಲೀಸರು ತಡೆದಿದ್ದಾರೆ.
ರಾಜಭವನದ ಬಳಿ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್, ಭಾಷಾ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ದಾಳಿ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾಸರಗೋಡಿನಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯಗೊಳಿಸುವ ಮಸೂದೆ ಹಿಂಪಡೆಯದಿದ್ದರೆ ಕರ್ನಾಟಕ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಮಂಗಳೂರಿನಲ್ಲಿ ಬೃಹತ್ ಚಳವಳಿ ರೂಪಿಸಲಾಗುವುದು. ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡಲಾಗುವುದು. ವಯನಾಡ್‌ಗೆ ಹೋಗುವ ಮಾರ್ಗವನ್ನೂ ಬಂದ್ ಮಾಡಲಾಗುವುದು. ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸುವ ಎಲ್ಲಾ ಗಡಿ ಹೆದ್ದಾರಿಗಳಲ್ಲಿ ಹೋರಾಟ ನಡೆಯಲಿದೆ ಎಂದು ಅವರು ಹೇಳಿದರು.ಕಾಸರಗೋಡು ಕರ್ನಾಟಕಕ್ಕೆ ಸೇರಿದ್ದೆಂದು ಮಹಾಜನ್ ವರದಿ ಸ್ಪಷ್ಟವಾಗಿ ಹೇಳಿದೆ ಎಂದು ವಾಟಾಳ್ ನಾಗರಾಜ್ ಹೇಳಿದರು. ನಮ್ಮವರ ಹೊಣೆಗೇಡಿತನದಿಂದ ಕಾಸರಗೋಡು ನಮ್ಮ ಕೈ ತಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಯ್ಯಾರ ಕಿಞ್ಞಣ್ಣ ರೈ ಅವರಂತಹ ಮಹಾನ್ ಕನ್ನಡ ಕವಿಗಳು ಹುಟ್ಟಿದ ನೆಲ ಕಾಸರಗೋಡು ಎಂದು ನೆನಪಿಸಿದರು. ಅಲ್ಲಿರುವ ಕನ್ನಡಿಗರು ನಮ್ಮವರು, ಅವರಿಗೆ ಯಾವುದೇ ರೀತಿಯ ಮೋಸವಾಗಲು ಬಿಡುವುದಿಲ್ಲ ಎಂದು ಅವರು ಗುಡುಗಿದರು.
ಕೇವಲ ಕಾಸರಗೋಡು ಮಾತ್ರವಲ್ಲ, ಸೊಲ್ಲಾಪುರ ಕೂಡ ಕರ್ನಾಟಕದ್ದೇ ಎಂದು ಹೇಳಿದ ವಾಟಾಳ್ ನಾಗರಾಜ್, ಈ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕು ಎಂದು ಕರೆ ನೀಡಿದರು. ಕರ್ನಾಟಕ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಮಲಯಾಳಂ ಭಾಷೆ ಕಡ್ಡಾಯ ಮಸೂದೆ ವಾಪಸ್ ಪಡೆಯದಿದ್ದರೆ ಕರ್ನಾಟಕ ಬಂದ್ ಅನಿವಾರ್ಯ ಎಂದು ಅವರು ಮತ್ತೊಮ್ಮೆ ಎಚ್ಚರಿಸಿದರು.



