ಗೌರಿ- ಗಣೇಶನ ಆರಾಧನೆ ಒಂದು ದಿನದ ಆಚರಣೆಯಲ್ಲ. ಅದು ವಾರಗಳ ಕಾಲ ನಡೆಯುವ ಸಂಭ್ರಮ. ಕಬ್ಬು ತಿನ್ನುವ ಹಬ್ಬ, ಸಂಬಂಧಗಳ ನಂಟನ್ನು ಇನ್ನಷ್ಟು ಗಟ್ಟಿ ಮಾಡುವ ಚತುರ್ಥಿ ಹಬ್ಬ ಆಚರಿಸುವ ಸಂಭ್ರಮವೇ ಬೇರೆ. ಮನೆಯಲ್ಲಿಯೂ ಮನದಲ್ಲಿಯೂ ಖುಷಿಯೋ ಖುಷಿ. ಗೌರ-ಗಣೇಶನ ಆರಾಧನೆಯೊಂದಿಗೆ ಜನ ಪುಳಕಿತರಾದರು.

ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಸವಿಯನ್ನು ಉಂಡು ಕೆಲವೇ ದಿನಗಳು ಕಳೆಯುವಷ್ಟರಲ್ಲಿ ಗೌರಿ-ಗಣೇಶ ಹಬ್ಬದ ಸಡಗರ. ಅಷ್ಟಮಿಯ ಸಿಹಿ ಮುಗಿಯುತ್ತ ಬರುತ್ತಿದ್ದಂತೆ ಇದೀಗ ಗೌರಿ ಗಣೇಶ ಹಬ್ಬದ ಸಿಹಿ ಉನ್ನಲು ತಯಾರಾಗುತ್ತಿದ್ದೇವೆ.
ಹಿಂದೂ ಸಂಪ್ರದಾಯದಲ್ಲಿ ಗೌರಿ-ಗಣೇಶ ಹಬ್ಬ ಮಹತ್ತರವಾದ ಹಬ್ಬವಾಗಿದ್ದು. ಹಿರಿಯರು ಕಿರಿಯರಿಗೆ ಬಹುಮಾನವಾಗಿ ಕೊಟ್ಟು ಹೋದ ಹಬ್ಬವೆಂದರೂ ತಪ್ಪಗಲಾರದು. ಹಬ್ಬಗಳ ಆಚರಣೆಯಿಂದ ಐಕ್ಯತೆಯ ಭಾವನೆ ಮೂಡಿ ಭಾಂದವ್ಯ ವೃದ್ಧಿಸುವುದರಲ್ಲಿ ಎರಡು ಮಾತಿಲ್ಲ.
ಪೌರಾಣಿಕ ಹಿನ್ನೆಲೆ:
ಗೌರಿ ಗಣೇಶ ಹಬ್ಬವನ್ನು ಒಟ್ಟಾಗಿ ಮಾಡುವುದು ಈ ಹಬ್ಬದ ವಿಶಿಷ್ಟವಾಗಿದೆ. ಶಾಸ್ತ್ರದ ಪ್ರಕಾರ ಗೌರಿ ಹಬ್ಬದಂದು ಮಹಾಮಾತೆ ಪಾರ್ವತಿ ದೇವಿಯು ತನ್ನ ತವರುಮನೆಗೆ ಹೋಗುತ್ತಾಳೆ. ಚಾಂದ್ರಮಾನ ಪಂಚಾಂಗದ ಪ್ರಕಾರ ಈ ಹಬ್ಬ ಭಾದ್ರಪದ ತೃತೀಯ ದಿನದಂದು ಬರುತ್ತದೆ. ಮಾರನೆಯ ದಿನ ವಿನಾಯಕ ಚೌತಿ ಆ ದಿನದಂದು ಜಗನ್ಮಾತೆಯಾದ ಪಾವರ್ತಿಯನ್ನು ತನ್ನ ಮಗನಾದ ವಿನಾಯಕ ಬಂದು ಕರೆದುಕೊಂಡು ಹೋಗುತ್ತಾನೆ ಎಂಬ ಮಾತಿದೆ.
ಹಬ್ಬದ ತಯಾರಿ:
ಗೌರಿ ಗಣೇಶ ಹಬ್ಬವೆಂದರೆ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡುವ ಕಾರಣ ಈ ಹಬ್ಬದ ಸಡಗರ ತುಸು ಜೋರಾಗಿರುತ್ತದೆ. ಗೌರಿಯನ್ನು ಮನೆಗೆ ಬರಮಾಡಿಕೊಳ್ಳಲು ಮುತ್ತೈದೆಯರು ಹೊಸ ಬಟ್ಟೆ ಬರೆಗಳನ್ನು ಖರೀದಿಸಿ ಹಬ್ಬದ ದಿನ ಅದನ್ನು ಧರಿಸಿ ದೇವಿಯನ್ನು ಪೂಜೆಯ ಮೂಲಕ ಮನೆಗೆ ಬರಮಾಡಿಕೊಳ್ಳುತ್ತಾರೆ.
ಕಬ್ಬು ತಿನ್ನುವ ಹಬ್ಬ: ಹಿಂದೂ ಸಂಪ್ರದಾಯದ ಪ್ರಕಾರ ಚತುರ್ಥಿ ಹಬ್ಬವನ್ನು ಗಣೇಶ ಹಬ್ಬ ಎಂದು ಪರಿಗಣಿಸಲಾಗಿದ್ದು ಕಬ್ಬು ಈ ದಿನದ ವಿಶೇಷಗಳಲ್ಲಿ ಒಂದು. ಗಣಪತಿಯ ಶಿರವು ಆನೆಯ ಶಿರವಾದ ಕಾರಣ ಗಜನಾಯಕನನ್ನು ಕಬ್ಬುಗಳಿಂದ ಅಲಂಕರಿಸಲಾಗುತ್ತದೆ. ಈ ಹಬ್ಬದಂದು ಪ್ರತಿಯೊಂದು ಮನೆಯಲ್ಲಿಯೂ ಕೂಡ ಕಬ್ಬನ್ನು ತೋರಣವಾಗಿ ಕಟ್ಟುತ್ತಾರೆ. ಅಷ್ಟೇ ಅಲ್ಲದೆ ಕಬ್ಬಿನಿಂದ ಗಣೇಶನನ್ನು ಮಂಟಪವನ್ನು ಅಲಂಕರಿಸುತ್ತಾರೆ. ಮನೆಗಳಿಗೆ ಕಬ್ಬುಗಳನ್ನು ತಮ್ಮ ವಾಹನಗಳಲ್ಲಿ ಹಿಡಿದುಕೊಂಡು ಹೋಗುವುದನ್ನು ನೋಡಿದರೆ ತಿಳಿಯುತ್ತದೆ ಈ ಹಬ್ಬಕ್ಕೆ ಕಬ್ಬು ಎಷ್ಟು ಪ್ರಾಮುಖ್ಯವೆಂದು. ಅಷ್ಟೆ ಅಲ್ಲದೆ ನಗರಗಳ ಪ್ರಮುಖ ಬೀದಿಗಳಲ್ಲಿ ಕಬ್ಬುಗಳನ್ನು ರಸ್ತೆ ಬದಿಯಲ್ಲಿ ಮಾರಾಟ ಮಾಡುವುದನ್ನು ಕಾಣಬಹುದಾಗಿದೆ.
ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ವಿಘ್ನ ವಿನಾಶಕ ಕರೆಯಲ್ಪಡುವ ಏಕದಂತನಿಗೆ ಯಾವುದೇ ಕಾರ್ಯಕ್ರಮದಲ್ಲಿಯೂ ಕೂಡ ಮೊದಲು ಪೂಜೆ ನಡೆಯಬೇಕು ಎಂಬುವುದು ವಾಡಿಕೆ. ಅದರಂತೆಯೇ ಗಣೇಶ ಹಬ್ಬದಂದು ಪ್ರತಿಯೊಂದು ದೇವಸ್ಥಾನಗಳಲ್ಲಿ ವಿನಾಯಕನಿಗೆ ವಿಶೇಷವಾದ ಪೂಜೆಗಳು ನೇರವೆರುತ್ತದೆ. ಸ್ವರ್ಣ ಗೌರಿ ಹಬ್ಬದಂದೆ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಶುರುವಾಗುತ್ತದೆ. ಈ ದಿನ ದಂದು ಮನೆಯವರೆಲ್ಲರೂ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆಗಳಲ್ಲಿ ಪಾಲ್ಗೋಳುತ್ತಾರೆ. ಪ್ರತಿಯೊಂದು ದೇವಸ್ಥಾನದಲ್ಲಿಯೂ ಕೂಡ ವಿಶೇಷ ಪೂಜೆಯಿದ್ದು ಲೋಕ ಕಲ್ಯಾಣಕ್ಕಾಗಿ ಗಣೇಶನಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ.
ಮನೆಯಲ್ಲಿ ವಿಶಿಷ್ಟ ಭೋಜನಗಳು: ಮನೆಯ ಗೃಹಿಣಿಯ ಮುಂಜಾನೆಯೇ ಎದ್ದು ಮನೆಯನ್ನೆಲ್ಲಾ ಗುಡಿಸಿ ಸಾರಿಸಿ ರಂಗೋಲಿಯನ್ನು ಇಡುವ ಮೂಲಕ ಹಬ್ಬದ ತಯಾರಿ ನಡೆಯತ್ತದೆ. ಬಾಂಧವ್ಯಗಳನ್ನು ಬೆಸೆಯುವ ಹಬ್ಬಗಳಾದುದರಿಂದ ಮನೆಯವರೆಲ್ಲರೂ ಸೇರಿ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಮನೆವರು ದಿನವಿಡೀ ಗಣೇಶನನ್ನು ಸ್ತುತಿಸುತ್ತ ವಿಧ ವಿಧವಾದ ಅಡುಗೆಗಳನ್ನು ಮಾಡುತ್ತಾರೆ. ಮನೆಯಲ್ಲಿ ಗಣೇಶನಿಗೆ ಪ್ರಿಯವಾದ ಚಕ್ಕುಲಿ, ಕೋಡುಬಳೆ, ಕಜ್ಜಾಯ, ಮೋದಕ, ಲಡ್ಡು ಹೀಗೆ ಹತ್ತು ಹಲವಾರು ರೀತಿಯ ಭಕ್ಷಗಳನ್ನು ತಯಾರಿಸಿ ಗಣಪತಿಗೆ ನೈವೇದ್ಯವಾಗಿ ಇಟ್ಟರೆ ಇನ್ನು ಕೆಲವರು ಅಂಗಡಿಗಳಲ್ಲಿ ಗಣೇಶ ಹಬ್ಬಕ್ಕೆಂದೇ ವಿಶೇಷವಾಗಿ ತಯಾರಿಸಿದ ಸಿಹಿತಿಂಡಿಗಳನ್ನು ತಂದು ದೇವರಿಗೆ ಬಡಿಸುತ್ತಾರೆ. ಗಣಪತಿಯನ್ನು ತಿಂಡಿಬೊಕ ಎಂದು ತಮಾಷೆ ಮಾಡುವುದುಂಟು ಕಾರಣ ಗಣಪತಿಗೆ ಸಿಹಿ ಭಕ್ಷಗಳೆಂದರೆ ಎಲ್ಲಿಲ್ಲದ ಪ್ರೀತಿ ಆದ್ದರಿಂದ ಈ ಹಬ್ಬದಂದು ವಿಶಿಷ್ಟ ಭಕ್ಷಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ.
ಗಲ್ಲಿ ಗಲ್ಲಿಗಳಲ್ಲಿ ಗಣೇಶನನ್ನು ಕೂರಿಸುವುದು:
ಗಣೇಶ ಹಬ್ಬ ರಾಷ್ಟ್ರೀಯ ಹಬ್ಬವಾದುದರಿಂದ ದೇಶದ ಎಲ್ಲ ಕಡೆಗಳಲ್ಲಿಯೂ ಸಹ ಗಣೇಶ ಹಬ್ಬವನ್ನು ಆಚರಿಸುವುದನ್ನು ಕಾಣುತ್ತೇವೆ. ಅದರಲ್ಲೂ ಸಹ ಮಹಾರಾಷ್ಟ್ರ ಹಾಗೂ ದಕ್ಷಿಣ ಭಾಗಗಳಲ್ಲಿ ಈ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸುತ್ತಾರೆ. ಗಣೇಶ ಹಬ್ಬದಂದು ನಗರದ ಬೀದಿಗಳಲ್ಲಿ ಗಣೇಶ ವಿಗ್ರಹಗಳನ್ನು ಕುಳ್ಳಿರಿಸಿ ವಿವಿಧ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಸಿ ಸಾರ್ವಜನಿಕರಿಗೆ ಮನೋರಂಜನೆಯನ್ನು ನೀಡುತ್ತಾರೆ. ಸಾರ್ವಜನಿಕವಾಗಿ ಗಣಪತಿಯನ್ನು ೩ ಅಥವಾ ೭ ದಿನಗಳಲ್ಲಿ ವಿಸರ್ಜಿಸುತ್ತಾರೆ. ಕೆಲವೊಂದು ಮನೆಗಳಲ್ಲಿಯೂ ಕೂಡ ಗಣಪತಿಯ ವಿಗ್ರಹಗಳನ್ನು ಇಡುತ್ತಾರೆ. ಮನೆಯಲ್ಲಿ ಇಟ್ಟ ಗಣಪತಿಯನ್ನು ಅದೇ ದಿನದಂದು ನೀರಿಗೆ ವಿಸರ್ಜಿಸಬೇಕು ಎನ್ನುವುದು ಕೆಲವರ ಮಾತು. ಕೆಲವೊಂದು ಸಂಘ ಸಂಸ್ಥೆಗಳು ಇಡುವ ಗಣಪತಿಯು ಒಂದು ವಾರ ಅಥವಾ ಮೂರು ದಿನಗಳ ನಂತರ ಅತ್ಯಂತ ಸಡಗರಿಂದ ವಿರ್ಸಜಿಸಲಾಗುತ್ತದೆ. ಗಣಪತಿಯ ವಿರ್ಸಜನೆಯನ್ನು ನೋಡಲು ಜನರು ಕ್ಕಿಕ್ಕಿರಿದು ಸೇರುತ್ತಾರೆ.
ಗೌರಿ-ಗಣೇಶ ಹಬ್ಬ ಎರಡನ್ನು ಜತೆಯಲ್ಲಿಯೇ ಆಚರಿಸಲಾಗುತ್ತಿದ್ದು, ಇದು ದೇವರಾಧನೆಯ ಹಬ್ಬವಾದರೂ ಇದರ ಮೂಲತತ್ವ ಸಾಂಸ್ಕ್ರತಿಕ ಹಿನ್ನೆಲೆಯಿಂದ ಕೂಡಿದೆ. ಯಾವುದೇ ಹಬ್ಬವಾದರೂ ಕೂಡ ಮನೆ ಮಂದಿ ಸೇರಿ ಆಚರಿಸುವುದರೊಂದಿಗೆ ಐಕ್ಯತೆಯ ಭಾವನೆ ಎಲ್ಲರಲ್ಲಿಯೂ ಮೂಡಬೇಕು. ಇಂದು ನಾವು ಆಚರಿಸುವ ಹಬ್ಬದ ಮುಂದಿನ ನಮ್ಮ ಪೀಳಿಗೆ ಇದರ ಮಹತ್ವ ತಿಳಿಯಬೇಕು. ಹಬ್ಬ ಹರಿದಿನಗಳು ಕೇವಲ ಶೀಕಿಯಾಗದೇ ನಮ್ಮ ಧರ್ಮ ನಮ್ಮ ತನವನ್ನು ಎತ್ತಿ ಇಡಿಯಬೇಕು. ಇದು ನಮ್ಮ ಆಶಯ.


