ಮಂಗಳೂರು, ಡಿ. 05 : ಕಿನ್ನಿಗೋಳಿಯಲ್ಲಿ ವೃದ್ದ ದಂಪತಿಯನ್ನು ಗುರಿಯಾಗಿಸಿ ನಡೆದ ‘ಡಿಜಿಟಲ್ ಅರೆಸ್ಟ್’ ಪ್ರಕರಣ ಬೆಳಕಿಗೆ ಬಂದಿದ್ದು, ಬ್ಯಾಂಕ್ ಮ್ಯಾನೇಜರ್ ಅವರ ಸಮಯಪ್ರಜ್ಞೆಯಿಂದಾಗಿ 84 ಲಕ್ಷ ರೂ. ಬೃಹತ್ ವಂಚನೆ ತಪ್ಪಿದೆ.


ಡಿಸೆಂಬರ್ 1 ರ ಸಂಜೆ, ವಂಚಕರ ತಂಡವೊಂದು ಕಿನ್ನಿಗೋಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗೆ ಕರೆ ಮಾಡಿ ಡಿಜಿಟಲ್ ಅರೆಸ್ಟ್ ಮಾಡಿದೆ. ಈ ವೇಳೆ ವೃದ್ಧ ದಂಪತಿಯನ್ನು ತಂಡವು ಹಣ ನೀಡುವಂತೆ ಬೆದರಿಸಿದೆ. ಜೊತೆಗೆ ತಮ್ಮ ಮಾತನ್ನು ಕೇಳದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದೆ.
ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರಬೇಡಿ. ಒಂದು ವೇಳೆ ನೀವು ಮನೆಯಿಂದ ಹೊರಗೆ ಕಾಲಿಟ್ಟರೆ ನಮ್ಮ ಸಿಬ್ಬಂದಿ ಗುಂಡು ಹಾರಿಸುತ್ತಾರೆ ಎಂದು ವಂಚಕರು ದಂಪತಿಗೆ ಎಚ್ಚರಿಕೆ ನೀಡಿದ್ದರು. ಇದರಿಂದ ಗಾಬರಿಗೊಂಡ ದಂಪತಿಗಳು ಕಿನ್ನಿಗೋಳಿಯ ತಮ್ಮ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ, ತಮ್ಮ ಎಫ್ ಡಿ ಯಲ್ಲಿದ್ದ 84 ಲಕ್ಷ ರೂ.ವನ್ನು ತಕ್ಷಣವೇ ಉಳಿತಾಯ ಖಾತೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ದಾರೆ.ಡಿಸೆಂಬರ್ 3 ರಂದು ಬೆಳಿಗ್ಗೆ, ವೃದ್ಧ ದಂಪತಿ ಒತ್ತಡಕ್ಕೆ ಮಣಿದು ಎಫ್‌ಡಿ ಯಲ್ಲಿದ್ದ ಹಣವನ್ನು ಉಳಿತಾಯ ಖಾತೆಗೆ ವರ್ಗಾಯಿಸಿದ್ದು, ಇದರಿಂದ ಬ್ಯಾಂಕ್ ಮ್ಯಾನೇಜರ್‌ಗೆ ಸಂಶಯ ಬಂದು ತಕ್ಷಣವೇ ಮುಲ್ಕಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು.ಪೊಲೀಸರು ತಕ್ಷಣವೇ ದಂಪತಿಯ ಮನೆಗೆ ಭೇಟಿ ನೀಡಿದರು.
ಪರಿಶೀಲನೆಯ ನಂತರ, ದಂಪತಿಗಳು ಡಿಜಿಟಲ್ ಅರೆಸ್ಟ್ ಆಗಿರುವುದು ಬೆಳಕಿಗೆ ಬಂದಿದೆ.ಕೂಡಲೇ ಎಚ್ಚೆತ್ತ ಪೊಲೀಸರು ವೃದ್ಧ ದಂಪತಿಯ 84 ಲಕ್ಷ ರೂ.ವನ್ನು ಫ್ರೀಜ್ ಮಾಡಿದರು. ಇದರಿಂದಾಗಿ ವಂಚಕರಿಗೆ ಹಣವನ್ನು ಪಡೆಯಲು ಸಾಧ್ಯವಾಗಲಿಲ್ಲ. ಅವರ ಸಮಯೋಚಿತ ಕ್ರಮದಿಂದ ದಂಪತಿಗಳು ವಂಚನೆಯಿಂದ ಪಾರಾಗಿದ್ದಾರೆ.




