ಮಂಗಳೂರು: ಕರಾವಳಿ ಪ್ರದೇಶದ ವಿದ್ಯಾರ್ಥಿಗಳಲ್ಲಿ ಯುಪಿಎಸ್ಸಿ ಹಾಗೂ ಕೆಪಿಎಸ್ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಪದವಿ ಪೂರ್ಣಗೊಳಿಸಿದ ನಂತರವೇ ಪರೀಕ್ಷಾ ಸಿದ್ಧತೆ ಆರಂಭಿಸುವ ಪ್ರವೃತ್ತಿ ಜಾಗೃತಿಯ ಕೊರತೆಯ ಪ್ರಮುಖ ಕಾರಣವಾಗಿದೆ. ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಪ್ರಚಲಿತ ವಿದ್ಯಮಾನಗಳು ಹಾಗೂ ಸಮಕಾಲೀನ ವಿಚಾರಗಳತ್ತ ನಿರಂತರ ಗಮನಹರಿಸಿದಾಗ ಯಶಸ್ಸು ಸಾಧ್ಯ ಎಂದು ಬಲ್ಮಠ ದಯಾನಂದ ಪೈ ಸತೀಶ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಮಹಿಳಾ ಪ್ರಾಧ್ಯಾಪಕಿ ಡಾ. ಸುಮನ ಸುಧಾಕರ್ ಬೋಳಾರ್ ಹೇಳಿದರು.

ಅವರು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರ ಸಂಘ ನಿಯಮಿತ , ಸೌತ್ವಾರ್ಫ್, ಬಂದರು, ಮಂಗಳೂರು ಇವರ ಆಶ್ರಯದಲ್ಲಿ ನವೀಕೃತ ಮಂಜುಗಡ್ಡೆ ಸ್ಥಾವರ ಉದ್ಘಾಟನಾ ಸಮಾರಂಭ ಹಾಗೂ ರೂ.17 ಲಕ್ಷ ವೆಚ್ಛದಲ್ಲಿ 210 ವಿದ್ಯಾರ್ಥಿಗಳಿಗಾಗಿ ಜರಗಿದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸುದ್ದಿಪತ್ರ ಓದುವುದನ್ನು ವಿದ್ಯಾರ್ಥಿಗಳು ಎರಡು ರೀತಿಯಲ್ಲಿ ಅಭ್ಯಾಸ ಮಾಡಬೇಕಿದೆ. ಕನಿಷ್ಠ ಅರ್ಧಗಂಟೆಯಾದರೂ ಪ್ರತಿನಿತ್ಯ ವಿಷಯಾಧ್ಯಯನಕ್ಕೆ ಮೀಸಲಿಡುವುದರಿಂದ ಜ್ಞಾನವೃದ್ಧಿಗೆ ನೆರವಾಗುತ್ತದೆ. ಡಿಜಿಟಲ್ ಮೀಡಿಯಾ ಮತ್ತು ಮೊಬೈಲ್ ಬಳಕೆಯನ್ನು ಸಮಯ ವ್ಯರ್ಥ ಮಾಡುವ ಸಾಧನವಲ್ಲದೆ, ಪಾಸಿಟಿವ್ ಮಾಹಿತಿಯನ್ನು ಪಡೆದುಕೊಳ್ಳುವ ಉಪಕರಣಗಳಾಗಿ ಬಳಸುವವರಾಗಿರಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಮಂಗಳೂರು ಉಪವಿಭಾಗ ತ್ರಿವೇಣಿ ರಾವ್ ಕೆ. ಮಾತನಾಡಿ, ಸಹಕಾರ ಸಪ್ತಾಹದ ಆಚರಣೆ ದೇಶದುದ್ದಕ್ಕೂ ಆಚರಿಸಲಾಗುತ್ತಿದೆ. ಸಮುದಾಯದ ಚೇತನ್ ಬಂಗೇರ ಸಹಕಾರ ರತ್ನ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಅಭಿನಂದನೀಯ. ಮಕ್ಕಳ ಹಾಗೂ ಸಹಕಾರಿ ಹಬ್ಬವನ್ನು ಆಚರಿಸಿದ ವಾತಾರವಣವಿದೆ. ಸ್ಪರ್ಧಾತ್ಮಕ ವಿಚಾರಗಳ ಪರೀಕ್ಷೆ ಎದುರಿಸುವ ವಿಚಾರವಾಗಿ ಮಾಹಿತಿ ಕೊಡುವ ಪ್ರಯತ್ನ ವಿಶಿಷ್ಟವಾದುದು. ಪ್ರತಿಭಾ ಪುರಸ್ಕಾರ ಪಡೆದುಕೊಂಡವರು ಮುಂದೆ ಭವಿಷ್ಯದಲ್ಲಿ ಸಮಾಜಕ್ಕೆ ಏನು ಕೊಡುತ್ತೇವೆ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಯಶಸ್ಸು ಸಾಧಿಸುವವರಾಗಿರಿ ಎಂದರು.
ಮಂಗಳೂರು ಮೀನುಗಾರಿಕೆ ಬಂದರು ಉಪ ನಿರ್ದೇಶಕಿ ರೇವತಿ ಜೆ.ಎ. ಮಾತನಾಡಿ ಸಂಘವು ತನ್ನ ಚಟುವಟಿಕೆಗಳನ್ನು ವಿಸ್ತರಿಸಿ, ಸಮಾಜಮುಖಿ ಕಾರ್ಯಗಳಲ್ಲಿ ಮತ್ತಷ್ಟು ತೊಡಗಿ, ಸಮುದಾಯಕ್ಕೆ ಮತ್ತು ವಿಶೇಷವಾಗಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸಲಿ. ಸಮಾಜದ ನಾಡಿ ಸ್ಪಂದಿಸುವ ಸಂಘಟನೆಗಳು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಮಾನವೀಯ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಗೈದಾಗ ಮಾತ್ರ ಶಕ್ತಿಶಾಲಿಯಾಗಿ ಬೆಳೆಯುತ್ತವೆ. ಅದೇ ದೃಷ್ಟಿಯಿಂದ ಸಂಘವು ತನ್ನ ಕಾರ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಕೇವಲ ಕಾರ್ಯಕ್ರಮಗಳಲ್ಲದೇ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ವಿವಿಧ ಚಟುವಟಿಕೆಗಳಿಗೆ ಆದ್ಯತೆ ನೀಡಬೇಕೆಂದು ಎಂದರು.
ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನ ಮಂಗಳೂರಿನ ಟೆರಿಟರಿ ಮ್ಯಾನೇಜರ್ ವಿಪಿಎನ್ ದಾಸ್ ಬನ್ಸ್ವಾಲ್ ನವೀಕೃತ ಮಂಜುಗಡ್ಡೆ ಸ್ಥಾವರವನ್ನು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸಹಕಾರಿ ಸಂಘದ ಸ್ಥಾಪಕ ಸದಸ್ಯ ಹಾಗೂ ಮಾಜಿ ಅಧ್ಯಕ್ಷ ಮತ್ಸ್ಯರಾಜ್, ಹಿರಿಯ ಮತ್ಸ್ಯೋದ್ಯಮಿ ಉಮೇಶ್ ಡಿ ಕರ್ಕೇರ, ಉತ್ತ ಮ ಫುಟ್ಬಾಲ್ ಆಟಗಾರ , ನಿರ್ದೇಶಕರುಗಳಾದ ಮೋಹನ್ ಬೆಂಗ್ರೆ, ವಿಲಿಯಂ ಡಿಸೋಜ, ಸರಿತಾ ಪುತ್ರನ್, ವಾಣಿ ಜಿ. ಸಾಲ್ಯಾನ್, ಗುಲ್ಷನ್ ಪುತ್ರನ್, ರವಿಕಿರಣ್ ಬೆಂಗ್ರೆ, ಮಹೇಶ್ ಉಳ್ಳಾಲ್, ದಯಾನಂದ್ ಪುತ್ರನ್, ಕಿರಣ್ ಪುತ್ರನ್,
ಯಾಂತ್ರಿಕ ಸಂಘದ ಮಂಜುಗಡ್ಡೆ ಸ್ಥಾವರದ ಪುನರುತ್ಥಾನದ ರೂವಾರಿ, ಲೋಕನಾಥ್ ಬೋಳಾರ ಬ್ಲಾಕ್ ದ್ವಿ ಅಂತಸ್ತಿನ ಕಟ್ಟಡದ ನಿರ್ಮಾತೃ, ಅದ್ವಿತೀಯ ಸಾಹಸಿ, ಅಪ್ರತಿಮ ದಾನಿ ಮೋಹನ್ ಬೆಂಗ್ರೆ ಇವರನ್ನು ಅಭಿನಂದಿಸಲಾಯಿತು.
ಇಂಜಿನಿಯರ್ ಗಳಾದ ಉದಯ್ ಕುಮಾರ್, ಮನೋಹರ್, ಸಿವಿಲ್ ಗುತ್ತಿಗೆದಾರ ಲ್ಯಾನ್ಸಿ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ವರದ್ರಾಜ್ ಬಂಗೇರ ಹಾಗೂ ಸುರೇಶ್ ಅಮೀನ್ ಸ್ವಾಗತಿಸಿದರು. ಸಹಕಾರಿ ಸಂಘದ ಉಪಾಧ್ಯಕ್ಷ ರವಿಕಿರಣ್ ಬೆಂಗ್ರೆ ವಂದಿಸಿದರು.
ರಾಜಸ್ಥಾನದಲ್ಲಿ ಜರಗಿದ ರಾಷ್ಟ್ರಮಟ್ಟದ ವಿಶೇಷ ಹ್ಯಾಂಡ್ ಬಾಲ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ದಿಯಾ ಟಿ.ಸಾಲ್ಯಾನ್ ಹಾಗೂ ದಿಶಾ ಟಿ.ಸಾಲ್ಯಾನ್ ಅವರನ್ನು ಅಭಿನಂದಿಸಲಾಯಿತು.

