ಮಂಗಳೂರು, ಅ. 25: ಜನವರಿ 18ರಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ವತಿಯಿಂದ ಮಂಗಳೂರಿನ ನೆಹರೂ ಮೈದಾನದಲ್ಲಿ ಜಾಗತಿಕ ಬಿಲ್ಲವರ ಪ್ರಥಮ ಕ್ರೀಡೋತ್ಸವ ನಡೆಯಲಿದೆ.



ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಯೂನಿಯನ್‌ನ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಈ ಬಗ್ಗೆ ಈಗಾಗಲೇ ಬಿಲ್ಲವ ಸಂಘಗಳ ಪ್ರತಿನಿಧಿಗಳ, ಸಮಾಜ ಮುಖಂಡರ ಸಭೆ ನಡೆದಿದೆ. ಕ್ರೀಡೋತ್ಸವದ ಲೋಗೋ ಬಿಡುಗಡೆಯನ್ನು ಈಗಾಗಲೇ ನಟ ಡಾ.ಶಿವರಾಜ್ ಕುಮಾರ್ ಬೆಂಗಳೂರಿನಲ್ಲಿ ನಡೆಸಿದ್ದಾರೆ.

ಕ್ರೀಡೋತ್ಸವದಲ್ಲಿ ಸಮಾಜದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಕಬಡ್ಡಿ ಮತ್ತು ತ್ರೋಬಾಲ್ ಪಂದ್ಯಾಟ ನಡೆಯಲಿದೆ. ಭಾಗವಹಿಸುವ ತಂಡಗಳು ಹೆಸರನ್ನು ಅ.27ರಿಂದ ನವೆಂಬರ್ 30ರೊಳಗೆ ಆನ್‌ಲೈನ್‌ನಲ್ಲಿ ನಿಯಮ, ನಿಬಂಧನೆಗೆ ಅನುಸಾರವಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗೆ 9242783800ನ್ನು ಸಂಪರ್ಕಿಸಬಹುದು ಎಂದು ಅವರು ಹೇಳಿದರು.
ಪುರುಷಕರ ಕಬಡ್ಡಿಯಲ್ಲಿ ಮೊದಲು ನೋಂದಾಯಿಸಿದ 24, ವಾಲಿಬಾಲ್‌ನಲ್ಲಿ 16, ಮಹಿಳೆಯರ ಕಬಡ್ಡಿ ಹಾಗೂ ತ್ರೋಬಾಲ್‌ನಲ್ಲಿ ತಲಾ 16 ತಂಡಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತ ತಂಡಗಳಿಗೆ ಪುರುಷರ ಕಬಡ್ಡಿಯಲ್ಲಿ ಟ್ರೋಫಿಯೊಂದಿಗೆ ಪ್ರಥಮ 2 ಲಕ್ಷ ರೂ., ದ್ವಿತೀಯ 1ಲಕ್ಷ ರೂ., ತೃತೀಯ 50 ಸಾವಿರ ರೂ., ಚತುರ್ಥ 25 ಸಾವಿರ ರೂ. ನಗದು ಬಹುಮಾನವಿರಲಿದೆ. ಮಹಿಳಾ ಕಬಡ್ಡಿ ತ್ರೋಬಾಲ್ ಮತ್ತು ಪುರುಷರ ವಾಲಿಬಾಲ್‌ಗೆ ಪ್ರಥಮ ತಲಾ 1 ಲಕ್ಷ ರೂ. ದ್ವಿತೀಯ 50 ಸಾವಿರ ರೂ., ತೃತೀಯ 25 ಸಾವಿರ ರೂ., ಮತ್ತು ಚತುರ್ಥ 10 ಸಾವಿರ ರೂ. ನಗದು ಬಹುಮಾನವಿರಲಿದೆ. ವೈಯಕ್ತಿಕ ಸಾಧನೆಗಳಿಗೂ ಪ್ರತ್ಯೇಕ ಬಹುಮಾನವಿರುತ್ತದೆ. ಸಮಾಜದ ಸಂಘಟನೆಯ ದೃಷ್ಟಿಯಿಂದ ಈ ಕ್ರೀಡಾಕೂಟ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಅವರು ಕಾರ್ಯಕ್ರಮದ ಸಂಪೂರ್ಣ ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಕೆ.ಟಿ. ಸುವರ್ಣ, ಕ್ರೀಡಾ ಕೋಶಾಧಿಕಾರಿ ಜಯಪ್ರಕಾಶ್, ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು, ಕ್ರೀಡಾ ಪ್ರಧಾನ ಸಂಚಾಲಕ ಸದಾನಂದ ಪೂಜಾರಿ, ಯೂನಿಯನ್ ಉಪಾಧ್ಯಕ್ಷರಾದ ಲೋಕನಾಥ್ ಅಮೀನ್,ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಉಪಸ್ಥಿತರಿದ್ದರು.



