ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಕ ಶಿಕ್ಷಣ ವಿಭಾಗದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಕಿಶೋರ್ ಕುಮಾರ್ ಸಿ.ಕೆ (60)ಅವರು ಭಾನುವಾರ ಮುಂಜಾನೆ ನಿಧನರಾದರು.
ಇವರು ಕಳೆದ ಕೆಲವು ದಿನಗಳಿಂದ ಅಸೌಖ್ಯದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಭಾನುವಾರಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ. ಇವರಿಗೆ ಪತ್ನಿ ಹಾಗೂ ಇಬ್ಬರು ಪುತ್ರರಿದ್ದಾರೆ.



ಮಂಗಳೂರು ವಿವಿಯ ಧೈಹಿಕ ಶಿಕ್ಷಕ ಶಿಕ್ಷಣ ವಿಭಾಗದಲ್ಲಿ ನಿರ್ದೆಶಕರಾಗಿ, ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಇವರು ಮಂಗಳೂರು ವಿವಿಯ ಪ್ರಭಾರ ಕುಲಪತಿಯಾಗಿ, ಕುಲಸಚಿವರಾಗಿ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕ್ರೀಡಾನೀತಿ ಅನುಷ್ಠಾನ ಸೇರಿದಂತೆ ಕ್ರೀಡಾ ಕ್ಷೇತ್ರದಲ್ಲಿ ಮಂಗಳೂರು ವಿವಿಯು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿರುವುದರಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ವಾಲಿಬಾಲ್, ಕ್ರಿಕೆಟ್, ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಕ್ರೀಡಾಪಟುವಾಗಿ ಗುರುತಿಸಿದ್ದರು.




