ಉಳ್ಳಾಲ : ರಾಜ್ಯ ಸರಕಾರದ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವೇಳೆ ಜಾತಿ, ಉಪಜಾತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಉಳ್ಳಾಲ ಖಾಝಿ ಸುಲ್ತಾನುಲ್ ಉಲಮಾ ಎ.ಪಿ ಅಬೂಬಕರ್ ಮುಸ್ಲಿಯಾರ್ ಕರೆ ನೀಡಿದ್ದಾರೆ ಎಂದು ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಬಿ.ಜಿ.ಹನೀಫ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಪ್ರಶ್ನಾವಳಿಯ 8ನೇ ಕಾಲಂನಲ್ಲಿರುವ ‘ರಿಲೀಜನ್/ಧರ್ಮ’ ಎಂದಿರುವಲ್ಲಿ ಎಲ್ಲ ಮುಸ್ಲಿಮರು ‘ಇಸ್ಲಾಮ್’ ಎಂದು ಬರೆಸಬೇಕು. 9ನೇ ಕಾಲಂನಲ್ಲಿರುವ ‘ಜಾತಿ’ ಎಂದಿರುವಲ್ಲಿ ಮುಸ್ಲಿಮ್’ ಎಂದೂ, 10ನೇ ಕಾಲಂನಲ್ಲಿ ಉಪಜಾತಿ/ ಸಬ್ ಕಾಸ್ಟ್ ಎಂದಿರುವಲ್ಲಿ ಬ್ಯಾರಿ ಭಾಷೆಯವರು ‘ಬ್ಯಾರಿ ಮುಸ್ಲಿಮ್’ ಎಂದು ದಾಖಲಿಸಬೇಕು.
ಪ್ರಶ್ನಾವಳಿಯ 15ನೇ ಕಾಲಂನಲ್ಲಿ ‘ಮಾತೃಭಾಷೆ/ಮದರ್ ಟಾಂಗ್’ ಎಂದಿರುವಲ್ಲಿ ಬ್ಯಾರಿ ಭಾಷೆಯವರು ‘ಬ್ಯಾರಿ’ ಎಂದೂ ಉರ್ದು, ನವಾಯತ್ ಇತ್ಯಾದಿ ಭಾಷೆಯವರು ತಮ್ಮ ಮಾತೃಭಾಷೆಯನ್ನು ಹೆಸರಿಸಬಹುದು ಎಂದು ಸೂಚಿಸಿದ್ದಾರೆ. ಸಮೀಕ್ಷೆಗೆ ಬರುವ ಸರಕಾರಿ ನೌಕರರನ್ನು ಆದರದಿಂದ ಸ್ವಾಗತಿಸಿ, ಸಂಪೂರ್ಣ ಸಹಕಾರ ನೀಡಬೇಕು. ತಮ್ಮ ಪಡಿತರ ಚೀಟಿ, ಕುಟುಂಬದ ಆರು ವರ್ಷಕ್ಕಿಂತ ಹೆಚ್ಚು ಪ್ರಾಯದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಒಟಿಪಿ ಪಡೆಯಲು ಆಧಾರ್ ಕಾರ್ಡ್‌ನಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆಯ ಮೊಬೈಲ್ ಫೋನ್ ಮತ್ತಿತರ ದಾಖಲೆಗಳನ್ನು ಸಿದ್ದವಾಗಿಟ್ಟುಕೊಳ್ಳಿ ಎಂದು ಖಾಝಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

