ಕೊಣಾಜೆ : ಪ್ರವಾಸೋದ್ಯಮ ಕ್ಷೇತ್ರವು ವಿಜ್ಞಾನ, ತಂತ್ರಜ್ಞಾನಗಳ ಪ್ರಭಾವದೊಂದಿಗೆ ಆಧುನಿಕ ಕಾಲಘಟ್ಟದಲ್ಲಿ ವಿಪುಲ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವವರು ಭಾಷಾ ಪ್ರೌಡಿಮೆಯೊಂದಿಗೆ ಸ್ಥಳೀಯ ಭಾಷೆ, ಸ್ಥಳೀಯ ಸಂಸ್ಕೃತಿಗಳ ಬಗ್ಗೆ ಹೆಚ್ಚೆಚ್ಚು ಅರಿವನ್ನು ಬೆಳೆಸಿಕೊಂಡು ಮುನ್ನಡೆಯಿರಿ ಎಂದು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮಾಜಿ ನಿರ್ದೇಶಕ ವಾಸುದೇವ ಅವರು ಹೇಳಿದರು.




ಅವರು ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ವಿಭಾಗದ ಪ್ರವಾಸೋದ್ಯಮ ಹಾಗೂ ಟ್ರಾವೆಲ್ ಮ್ಯಾನೇಜ್‌ಮೆಂಟ್ ವಿಭಾಗದ ವತಿಯಿಂದ ಟೂರಿಸಂ ಕ್ಲಬ್ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ಇಗ್ನಿಸಿಯಾ’ ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತವು ಇಂದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿವೆ. ವಿದೇಶಿ ಪ್ರವಾಸಿಗಳಿಗೆ ಉತ್ತಮ ಸೌಲಭ್ಯಗಳು ಇಂದು ಸಿಗುತ್ತಿವೆ. ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿಗಳು ಇಂದಿನ ಆಧುನಿಕತೆಯ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ ಎಂದರು.
ವಾಣಿಜ್ಯ ವಿಭಾಗದ ಡೀನ್ ಪ್ರೊ.ಪುಟ್ಟಣ್ಣ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ, ಆಧುನಿಕ ತಂತ್ರಜ್ಞಾನಗಳು ದುರುಪಯೋಗವಾಗದೆ, ಉಪಯೋಗಕಾರಿಯಾಗಿ ಸದ್ಬಳಕೆಯೊಂದಿಗೆ ಅವಕಾಶಗಳನ್ನಾಗಿ ಪರಿವರ್ತಿಸುವ ಚಾಕಚಕ್ಯತೆ ನಮ್ಮದಾಗಬೇಕು.ಬಆದರೆ ಮಕ್ಕಳಲ್ಲಿ ಯುವಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿದ್ದು, ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಎಂಬಿಎ ಟಿಟಿಎಂ ವಿಭಾಗದ ಅಧ್ಯಕ್ಷರಾದ ಡಾ.ಶೇಖರ್ ನಾಯ್ಕ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ಟೂರಿಸಂ ಕ್ಲಬ್ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಬೆಳವಣಿಗೆಗೆ ಸ್ಪೂರ್ತಿಯಾಗಲಿದೆ ಮತ್ತು ಅನೇಕ ಕಾರ್ಯಚಟುವಟಿಕೆಗಳಿಗೆ ವೇದಿಕೆಯನ್ನು ಒದಗಿಸಲಿದೆ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಡಾ.ಜೋಸೆಫ್ ಪಿ.ಡಿ.ಸ್ವಾಗತಿಸಿದರು. ವಿದ್ಯಾರ್ಥಿ ಉಮೇದ್ ವಂದಿಸಿದರು. ಅನುಷಾ ಕಾರ್ಯಕ್ರಮ ನಿರೂಪಿಸಿದರು.




