ದೇರಳಕಟ್ಟೆ : ಆಳುವ ಸರಕಾರಗಳು ಉದ್ಯೋಗಗಳನ್ನು ಸೃಷ್ಟಿಸುವ ಜವಾಬ್ದಾರಿಯನ್ನು ಮರೆತು ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ವಹಿಸಿ ಅಲ್ಲಿ ಯುವಜನರನ್ನು ಗುತ್ತಿಗೆ ಅರೆಗುತ್ತಿಗೆ ದುಡಿಸಿಕೊಳ್ಳಲಾಗುತ್ತಿದೆ ಎಂದು ಡಿವೈಎಫ್ಐ ದ.ಕ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆರೋಪಿಸಿದ್ದಾರೆ.
ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಉದ್ಯೋಗದ ಹಕ್ಕಿಗಾಗಿ ಯುವಜನ ಜಾಥಾದ ಭಾಗವಾಗಿ ದೇರಳಕಟ್ಟೆಯಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಂತೋಷ್ “ಇತ್ತೀಚೆಗೆ ಕೇಂದ್ರ ಸರಕಾರ ಇತ್ತೀಚೆಗಿನ ಬಜೆಟ್ ನಲ್ಲಿ ಇಎಲ್ಐ ಸ್ಕೀಮ್ ಎಂದು 2 ಲಕ್ಷ ಕೋಟಿ ಹಣವನ್ನು ಉದ್ಯೋಗ ಸೃಷ್ಟಿಯ ಹೆಸರಲ್ಲಿ 500 ಖಾಸಗೀ ಕಂಪನಿಗಳಿಗೆ ವಹಿಸುವ ಕಾರ್ಪೊರೇಟ್ ಪರವಾದ ನೀತಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಸಾವಿರಾರು ಉದ್ಯೋಗಗಳು ಖಾಲಿ ಬಿದ್ದಿದ್ದೆ ಅವುಗಳನ್ನು ಭರ್ತಿಗೆ ಕ್ರಮಗಳೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದೇ ಸಂದರ್ಭ ಮಾತನಾಡಿದ ಸಾಮಾಜಿಕ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ “ದೇಶದ ಯುವಜನತೆಗೆ ಸಮಾನ ಶಿಕ್ಷಣ ಸಮಾನ ಉದ್ಯೋಗವನ್ನು ಪಡೆಯುವ ಅವಕಾಶ ಇದ್ದರೂ ಇಂದಿಗೂ ಲಕ್ಷಗಟ್ಟಲೆ ವಿದ್ಯಾರ್ಥಿಗಳು, ಯುವಜನರು ಶಿಕ್ಷಣ ಹಾಗೂ ಉದ್ಯೊಗದಿಂದ ವಂಚಿತರಾಗಿಯೇ ಉಳಿದಿದ್ದಾರೆ. ರಾಜ್ಯದ ಯುವ ಜನತೆಗೆ ಪಾಠ ಮಾಡಬೇಕಿರುವ ವಿಶ್ವ ವಿದ್ಯಾನಿಲಯಗಳಲ್ಲೇ ಸಾವಿರಾರು ಹುದ್ದೆಗಳು ಖಾಲಿ ಬಿದ್ದಿವೆ. ಇರುವಂತಹ ಉಪನ್ಯಾಸಕರನ್ನೂ ಸರಕಾರ ಗೌರವಯುತವಾಗಿ ನಡೆಸುತ್ತಿಲ್ಲ. ಜೈಲಿನಲ್ಲಿರುವ ಖೈದಿಗಳಿಗೆ ಪಡೆಯುವ ವೇತನವನ್ನು ಕೂಡಾ ರಾಜ್ಯದ ಸಾವಿರಾರು ಶಿಕ್ಷಕರಿಗೆ ಲಭ್ಯವಾಗುತ್ತಿಲ್ಲ ಅನ್ನುವುದು ಬಹಳ ಆಘಾತಕಾರಿ ಬೆಳವಣಿಗೆ” ಎಂದು ಅಭಿಪ್ರಾಯಪಟ್ಟರು.
‘ಯುವಜನರ ನಡಿಗೆ ಉದ್ಯೋಗದ ಕಡೆಗೆ’, ತುಳುನಾಡ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲಪಾಲ್” ಎಂಬ ಘೋಷಣೆ ಯೊಂದಿಗೆ ಡಿವೈಎಫ್ಐ ಜಿಲ್ಲಾ ಸಮಿತಿ ನಡೆಸುತ್ತಿರುವ ಮೂರು ದಿನಗಳ ಯುವಜನ ಜಾಥಾದ ಭಾಗವಾಗಿ ದೇರಳಕಟ್ಟೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಡಿವೈಎಫ್ಐ ದ.ಕ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ಸುನಿಲ್ ತೇವುಲ, ರಝಾಕ್ ಮುಡಿಪು, ಅಶ್ರಫ್ ಹರೇಕಳ, ಸಾಮಾಜಿಕ ಹೋರಾಟಗಾರ ಇಸ್ಮತ್ ಫಜೀರ್, ಸ್ವಾಗತ ಸಮಿತಿಯ ಮುಖಂಡರಾದ ಮಹಾಬಲ ದೆಪ್ಪೆಲಿಮಾರ್, ಶೇಖರ್ ಕುಂದರ್, ಜನಾರ್ಧನ್ ಕುತ್ತಾರ್, ರಮೇಶ್ ಉಳ್ಳಾಲ, ರಾಜೇಶ್ವರಿ ತಲೆನೀರು, ಡಿವೈಎಫ್ಐ ನ ದಿವ್ಯರಾಜ್ ತೇವು, ಭರತ್ ರಾಜ್, ಶ್ರವಣ್ ತೇವುಲ, ಸುರೇಶ್ ತಲೆನೀರು ಮುಂತಾದವರು ಭಾಗವಹಿಸಿದ್ದರು.
ಉದ್ಯೋಗ ಸೃಷ್ಟಿಸಿ ಸ್ಥಳೀಯರಿಗೆ ಆದ್ಯತೆ ಒದಗಿಸಿ, ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳನ್ನು ಜಾರಿಗೆ ತನ್ನಿ ಎಂಬ ಬೇಡಿಕೆಯೊಂದಿಗೆ ಬೆಳ್ತಂಗಡಿಯಿಂದ ಆರಂಭವಾಗಿರುವ ಯುವಜನ ಜಾಥಾ ಜಿಲ್ಲೆಯಾದ್ಯಂತ ಸಂಚರಿಸಿ ಸೆ.9 ರಂದು ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯೊಂದಿಗೆ ಸಮಾರೋಪ ಗೊಳ್ಳಲಿದೆ.
ಕೊನೆಗೆ ಪ್ರತಿರೋಧದ ಪ್ರಜ್ಞೆಯನ್ನು ಮೂಡಿಸುವ ಸೈರನ್ ಎಂಬ ಬೀದಿನಾಟಕ ಪ್ರದರ್ಶಿಸಿದರು.





