ಕೊಣಾಜೆ : ವಿದ್ಯಾದಾನ ಎಂಬುದು ಎಲ್ಲಕ್ಕಿಂತಲೂ ಮಿಗಿಲಾದುದು. ಮೌಲ್ಯಾಧಾರಿತ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳು ಹೆಚ್ಚಿನ ಆದ್ಯತೆ ಕೊಡಬೇಕಿದೆ. ಆದರೆ ಇತ್ತೀಚೆಗೆ ಶಿಕ್ಷಣ ವ್ಯವಸ್ಥೆ ವ್ಯಾಪಾರೀಕರಣಗೊಳ್ಳುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಮಂಗಳೂರು ಲೋಕಾಯುಕ್ತ ಎಸ್ ಪಿ ಕುಮಾರ್ ಚಂದ್ರ ಅವರು ಹೇಳಿದರು. ಅವರು ಮುಡಿಪು ಸೂರಜ್ ಶಿಕ್ಷಣ ಸಂಸ್ಥೆಯಲ್ಲಿ ಉಳ್ಳಾಲ ತಾಲೂಕು ಪದವಿ ಪೂರ್ವ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಎಚ್ ಡಿಎಫ್ ಸಿ ಬ್ಯಾಂಕ್ ಮಲ್ಲಣ್ಣ ಗೌಡ ಅವರು ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡಾ ಆಯೋಜನೆ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಹುರುಪು ಮೂಡಿಸುತ್ತದೆ ಎಂದರು. ಸೂರಜ್ ಕಾಲೇಜಿನ ಸಲಹಾ ಸಮಿತಿ ಸದಸ್ಯರಾದ ರವೀಂದ್ರ ರೈ ಕಲ್ಲಿಮಾರ್ ಅವರು ಮಾತನಾಡಿ ಕ್ರೀಡೆಯು ದೈಹಿಕ ವ್ಯಾಯಾಮ ಮಾತ್ರವಲ್ಲ ನಮ್ಮಲ್ಲಿ ಶಿಸ್ತು, ಸಮಯಪಾಲನೆ, ಗುರಿ, ಸ್ಪರ್ಧಾತ್ಮಕ ಮನೋಭಾವನೆ, ಹೊಂದಾಣಿಕೆಯ ಭಾವವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.
ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮಂಜುನಾಥ ರೇವಣ್ಕರ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಾಂಶುಪಾಲರಾದ ರಕ್ಷಿತ್ ಕುಲಾಲ್, ದೈಹಿಕ ಶಿಕ್ಷಕರು ಹಾಗೂ ಕ್ರೀಡಾ ಸಂಘಟಕ ಅಶ್ರಫ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕರಾದ ಮಹಾದೇವ್ ಸ್ವಾಗತಿಸಿದರು. ಶಿಕ್ಷಕಿ ಪ್ರತಿಷ್ಠಾ ವಂದಿಸಿದರು. ಶಿಕ್ಷಕಿಯರಾದ ಭಾರತಿ ರೈ ಅಸೈಗೋಳಿ ಹಾಗೂ ವಂದನಾ ಕಾರ್ಯಕ್ರಮ ನಿರೂಪಿಸಿದರು.



