ಬೆಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕೆಂಪು ಕಲ್ಲು ಮತ್ತು ಮರಳಿನ ತೀವ್ರ ಅಭಾವವನ್ನು ತ್ವರಿತವಾಗಿ ಬಗೆಹರಿಸಿ, ಜನಪರ ನೀತಿಗಳನ್ನು ಜಾರಿಗೆ ತರಬೇಕು ಎಂಬ ಮನವಿಯೊಂದಿಗೆ, ಜಿಲ್ಲೆಯ ಬಿಜೆಪಿ ಪ್ರತಿನಿಧಿ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಹತ್ವಪೂರ್ಣ ಮಾತುಕತೆ ನಡೆಸಿತು.

ಈ ವೇಳೆ, ಕೆಂಪುಕಲ್ಲು ಮತ್ತು ಮರಳಿನ ಕೊರತೆಯಿಂದ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳು ಹಾಗೂ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಮುಖ್ಯಮಂತ್ರಿಯವರಿಗೆ ವಿವರಿಸಲಾಯಿತು. ಸಮಸ್ಯೆಗೆ ಶೀಘ್ರ ಪರಿಹಾರ ಒದಗಿಸಿ ಸಮರ್ಥ ಹಾಗೂ ಜನಪರ ನೀತಿ ರೂಪಿಸುವಂತೆ ನಿಯೋಗವು ಆಗ್ರಹಿಸಿತು.
ಈ ನಿಯೋಗದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಆಗಿರುವ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಜಿಲ್ಲಾ ಬಿಜೆಪಿ ಅಧ್ಯಕ್ಷ ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಕಿಶೋರ್ ಕುಮಾರ್ ಪುತ್ತೂರು, ಶಾಸಕರಾದ ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಡಾ. ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ರಾಜೇಶ್ ನಾಯಕ್, ಭಾಗೀರಥಿ ಮುರುಳ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯತೀಶ ಆರ್ವಾರ್ ಮತ್ತು ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಸಂತ ಪೂಜಾರಿ ಅವರು ಉಪಸ್ಥಿತರಿದ್ದರು.


