ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್, ಸಂದೇಶ ರವಾನಿಸುತ್ತಿದ್ದ 30ಕ್ಕೂ ಅಧಿಕ ಇನ್‌ಸ್ಟಾಗ್ರಾಂ ಖಾತೆಗಳ ವಿರುದ್ಧ ಚಿತ್ರ ನಟಿ ರಮ್ಯಾ ನೀಡಿದ ದೂರಿನನ್ವಯ ಎಫ್ಐಆರ್ ದಾಖಲಾಗಿದೆ. ನಟ ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಸಂದೇಶ ರವಾನೆ, ಕಾಮೆಂಟ್ ಮಾಡುತ್ತಿದ್ದವರ ವಿರುದ್ಧ ಜುಲೈ 28ರಂದು ಖುದ್ದು ರಮ್ಯಾ ಅವರೇ ತೆರಳಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಸೈಬರ್ ಕ್ರೈಮ್ ಠಾಣೆಗೆ ದೂರು ನೀಡಿದ್ದರು.

ಅದರನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 2023ರ 351(2) (ಕ್ರಿಮಿನಲ್ ಬೆದರಿಕೆಯ ಉದ್ದೇಶದ ಅಪರಾಧ), 351(3) (ಸಾವು, ತೀವ್ರ ನೋವುಂಟು ಮಾಡುವ ಉದ್ದೇಶದ ಕ್ರಿಮಿನಲ್ ಬೆದರಿಕೆ), 352 (ಉದ್ದೇಶಪೂರ್ವಕ ಅವಮಾನದ ಮೂಲಕ ಶಾಂತಿಭಂಗದ ಯತ್ನ), 75(1) (ಲೈಂಗಿಕ ಕಿರುಕುಳ) 75(1)(IV) (ಲೈಂಗಿಕ ಟೀಕೆ) ಹಾಗೂ 79 (ಮಹಿಳೆಯ ಗೌರವಕ್ಕೆ ಧಕ್ಕೆ) ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇನ್ಫೆಂಟ್ರಿ ರಸ್ತೆಯಲ್ಲಿರುವ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿ ಕಮಿಷನರ್ ಸೀಮಂತ್ ಕುಮಾರ್ ಅವರನ್ನು ಭೇಟಿ ಮಾಡಿದ್ದ ರಮ್ಯಾ, ಅಶ್ಲೀಲವಾಗಿ ಸಂದೇಶ ಕಳುಹಿಸಿದ 43 ಇನ್ಸ್ಟ್ರಾಗಾಂ ಪೇಜ್ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿನ್ನೆ ಮನವಿ ಮಾಡಿದ್ದರು.
ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದ ರಮ್ಯಾ, ”ರೇಣುಕಾಸ್ವಾಮಿ ಹತ್ಯೆ ಸಂಬಂಧ ಸುಪ್ರೀಂಕೋರ್ಟ್ ನೀಡಿದ ಆದೇಶಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎಂದು ಪೋಸ್ಟ್ ಮಾಡಿದ್ದೆ. ಈ ಪೋಸ್ಟ್ ಅನ್ನು ಕೆಲವರು ಟ್ರೋಲ್ ಮಾಡಿದ್ದರು. ಆದರೆ, ಇನ್ನೂ ಕೆಲವರು ಅಶ್ಲೀಲವಾಗಿ ಮೆಸೇಜ್ ಮಾಡಿದ್ದಾರೆ. ಹಾಗಾದರೆ ರೇಣುಕಾಸ್ವಾಮಿ ಮಾಡಿದ ಮೆಸೇಜ್ಗೂ ನೀವೂ ಮಾಡಿದ ಮೆಸೇಜ್ಗೂ ಏನು ವ್ಯತ್ಯಾಸ” ಎಂದು ಪೋಸ್ಟ್ ಮಾಡಿದ್ದ ಕಿಡಿಗೇಡಿಗಳ ವಿರುದ್ಧ ಕಿಡಿಕಾರಿದ್ದರು.
ಅಲ್ಲದೆ, “ಅಸಭ್ಯ ಸಂದೇಶಗಳಿಂದ ಮಹಿಳೆಯರ ಗೌರವಕ್ಕೆ ಚ್ಯುತಿ ಬರುತ್ತಿದೆ. ಇದರಿಂದಲೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದು ಸಮಾಜಕ್ಕೆ ಮಾರಕ. ಹೆಣ್ಣು ಮಕ್ಕಳ ಪರವಾಗಿ ಇಂದು ಧ್ವನಿ ಎತ್ತಿದ್ದೇನೆ. ಮಹಿಳೆಯರ ಹೆಸರು ಹಾಗೂ ಫೋಟೋ ಬಳಸಿ ಕೆಲವರು ಕೆಟ್ಟದಾಗಿ ಮೆಸೇಜ್ ಮಾಡಿರುವುದು ಗೊತ್ತಾಗಿದೆ. ಪವಿತ್ರಾಗೌಡಗೆ ರೇಣುಕಾಸ್ವಾಮಿ ಸಂದೇಶ ಕಳುಹಿಸಿದಾಗ ದರ್ಶನ್ ಅಭಿಮಾನಿಗಳಿಗೆ ರೋಷ ಬಂದಿದ್ದು, ಆ ರೋಷ ಈಗೇಕೆ ಬರುತ್ತಿಲ್ಲ. ಹಾಗಾದರೆ ನಿಮಗೂ ರೇಣುಕಾಸ್ವಾಮಿಗೂ ಏನು ವ್ಯತ್ಯಾಸ” ಎಂದು ಪ್ರಶ್ನಿಸಿದ್ದರು.
ಪ್ರಕರಣದ ಹಿನ್ನೆಲೆ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಟ ದರ್ಶನ್ ಮತ್ತು ಇತರ ಆರೋಪಿಗಳಿಗೆ ಜಾಮೀನು ನೀಡಿರುವ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದ ನಟಿ ರಮ್ಯಾ, ”ಭಾರತದ ಸಾಮಾನ್ಯ ಜನರಿಗೆ ಸುಪ್ರೀಂಕೋರ್ಟ್ ಆಶಾಕಿರಣ – ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ” ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದರು. ರಮ್ಯಾ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಶುರು ಮಾಡಿದ ಬೆನ್ನಲ್ಲೇ ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಟ್ರೋಲ್ ಆಗಲು ಶುರುವಾಗಿದ್ದವು. ಅಭಿಮಾನಿಗಳು ನಟಿಯ ದಿಟ್ಟ ನಡೆ – ನುಡಿಯನ್ನು ಪ್ರಶಂಸಿಸಿದರೆ, ಟ್ರೋಲಿಗರು ತಮ್ಮ ಆಟ ಶುರು ಮಾಡಿದ್ದರು.


