
ಕೊಣಾಜೆ : ಇಲ್ಲಿನ ಪೊಲೀಸ್ ಠಾಣಾ ವ್ಯಾಪ್ತಿಯ ಮೊಂಟೆಪದವು ಸಮೀಪ ಅತ್ಯಾಚಾರವೆಸಗಿ ಹತ್ಯೆಗೈದು ಬಾವಿಗೆ ಕಟ್ಟಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಎರಡು ತಿಂಗಳ ಬಳಿಕ ಹೊರರಾಜ್ಯದಿಂದ ವಶಕ್ಕೆ ಪಡೆದು ಬಂಧಿಸಲಾಗಿದೆ.
ಬಿಹಾರ ಮೂಲದ , ಮರದ ಮಿಲ್ ಕಾರ್ಮಿಕನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಮೇ.29 ರಂದು ಬಾವಿಯೊಳಕ್ಕೆ ಸೊಂಟಕ್ಕೆ ಕಲ್ಲುಗಳನ್ನು ಕಟ್ಟಿ ಹಾಕಿದ ಸ್ಥಿತಿಯಲ್ಲಿ ಸಕಲೇಶಪುರ ಮೂಲದ ಸುಂದರಿ(36) ಎಂಬ ಮಹಿಳೆ ಶವ ಪತ್ತೆಯಾಗಿತ್ತು. ಒಂದೂವರೆ ವರ್ಷಗಳಿಂದ ಮನೆ ಮನೆಗಳಿಗೆ ತೆರಳಿ ಕೆಲಸ ನಿರ್ವಹಿಸುತ್ತಿದ್ದ ಸುಂದರಿಯವರು ಮೊಂಟೆಪದವು ಸಮೀಪ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಇವರ ಜೊತೆಗಿದ್ದ ಇನ್ನೋರ್ವ ಕಾರ್ಮಿಕ ಆತನ ಮದುವೆ ನಿಮಿತ್ತ ಒಂದುನ ತಿಂಗಳ ಹಿಂದೆಯೇ ತೆರಳಿದ್ದರು. ಇದೇ ಸಂದರ್ಭವನ್ನು ಬಳಸಿಕೊಂಡ ಹತ್ತಿರದ ಮರದ ಮಿಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಹಾರ ಮೂಲದ ಕಾರ್ಮಿಕ ಅತ್ಯಾಚಾರವೆಸಗಿ ಹತ್ಯೆ ನಡೆಸಿ, ಸಮೀಪದ ಖಾಸಗಿ ವ್ಯಕ್ತಿಯೋರ್ವರ ತೋಟದ ಬಾವಿಗೆ ಎಸೆದಿದ್ದನು. ಶವ ಮೇಲಕ್ಕೆ ಬಾರದಂತೆ ಸೊಂಟಕ್ಕೆ ಕಲ್ಲುಗಳನ್ನು ಕಟ್ಟಿಹಾಕಿ ಎಸೆಯಲಾಗಿತ್ತು. ಪ್ರಕರಣ ಕುರಿತು ತನಿಖೆ ನಡೆಸಿದ್ದ ಕೊಣಾಜೆ ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸಿ, ಇದೀಗ ಎರಡು ತಿಂಗಳು ಮುಗಿಯುವುದರೊಳಗೆ ಹೊರರಾಜ್ಯದಿಂದ ಬಂಧಿಸಿದ್ದಾರೆ.


