
ಹಿಂದು ಧರ್ಮಕ್ಕೂ ಹಿಂದುತ್ವಕ್ಕೂ ಯಾವುದೆ ಸಂಬಂಧ ಇಲ್ಲ. ಹಿಂದುತ್ವವು ಸಂಘಪರಿವಾರದ ಸುಳ್ಳು, ಹಿಂಸೆಗಳನ್ನು ಒಳಗೊಂಡ ರಾಜಕೀಯ ಅಜೆಂಡಾ ಮಾತ್ರ. ತನ್ನ ರಾಜಕೀಯ ಉದ್ದೇಶವನ್ನು ಸಾಧಿಸಲು ಅದು ಮುಸ್ಲಿಮರನ್ನು ಗುರಿಯಾಗಿಸುತ್ತಿದೆ. ಆ ಮೂಲಕ ಹಿಂದುಗಳಲ್ಲಿ ಭಯ ಮೂಡಿಸಿ ತನ್ನ ಹಿಂದುತ್ವದ ಜಾಲದೊಳಗಡೆ ಕೆಡವುವ ಕೆಲಸ ಮಾಡುತ್ತಿದೆ ಎಂದು ಸಿಪಿಐ ಎಂ ರಾಜ್ಯ ಕಾರ್ಯದರ್ಶಿ ಡಾ. ಕೆ ಪ್ರಕಾಶ್ ಆರೋಪಿಸಿದರು. ಅವರು ಸಿಪಿಐಎಂ ದ.ಕ ಜಿಲ್ಲಾ ಸಮಿತಿ, ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಮತೀಯ ದ್ವೇಷದ ಕೊಲೆ, ಪ್ರತಿಕೊಲೆಗಳ ಸಮಗ್ರ ತನಿಖೆಗೆ ಒತ್ತಾಯಿಸಿ, ಮೂರು ದಶಕದ ಅವಧಿಯಲ್ಲಿ ನಡೆದಿರುವ ಕೋಮುವಾದಿ ಕೊಲೆಗಳನ್ನು ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಲು ಒತ್ತಾಯಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಮುಂದುವರಿದು ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತೀಯ ದ್ವೇಷದ ಸರಣಿ ಕೊಲೆಗಳು ನಡೆಯಲು ಪೊಲೀಸ್ ಅಧಿಕಾರಿಗಳ ಬೇಜವಾಬ್ದಾರಿತನ, ಕೋಮುವಾದಿ ಶಕ್ತಿಗಳ ಜೊತೆಗಿನ ಒಡನಾಟವೇ ನೇರ ಕಾರಣ. ಸಿಪಿಐಎಂ ಪಕ್ಷದ ಸತತ ಎಚ್ಚರಿಕೆಯನ್ನು ಜಿಲ್ಲೆಯ ಕಾಂಗ್ರೆಸ್ ನಾಯಕತ್ವ ಅಂದು ನಿರ್ಲಕ್ಷಿಸಿತು, ಪೊಲೀಸ್ ಕಮೀಷನರ್ ಅಗ್ರವಾಲ್ ರನ್ನು ಆರೋಪಗಳ ಹೊರತಾಗಿ ರಕ್ಷಿಸಿತು. ಅದರ ಪರಿಣಾಮ ಅಮಾಯಕರು ಕೊಲೆಗೀಡಾಗುವಂತಾಯ್ತು. ಈಗಲಾದರು ಕಾಂಗ್ರೆಸ್ ನಾಯಕತ್ವ ಎಚ್ಚೆತ್ತುಕೊಳ್ಳಲಿ, ನೂತನ ಪೊಲೀಸ್ ಅಧಿಕಾರಿಗಳು ಹಾಗೂ ಕೋಮುವಾದಿ ವಿರೋಧಿ ಪಡೆಗೆ ಬಲತುಂಬುವ ಕೆಲಸ ಮಾಡಲಿ ಎಂದು ಹೇಳಿದರು.ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಕೋಮು ದ್ವೇಷದ ಕೊಲೆ, ಪ್ರತಿಕೊಲೆ ಗಳು ಕನಿಷ್ಟ ಹತ್ತು ನಡೆದಿವೆ. ಬಹುತೇಕ ಪ್ರಕರಣಗಳ ಆರೋಪಿಗಳು ವರ್ಷದ ಒಳಗಡೆ ಜಾಮೀನು ಪಡೆದು ರಾಜೋರೋಷವಾಗಿ ತಿರುಗಾಡುತ್ತಿದ್ದಾರೆ. ಕಳೆದ ಮೂರು ದಶಕದ ಅವಧಿಯಲ್ಲಿ ಇಂತಹ ಕನಿಷ್ಟ ಮೂವತ್ತಕ್ಕೂ ಹೆಚ್ಚು ಕೊಲೆಗಳು ಇಲ್ಲಿ ನಡೆದಿವೆ. ಇವರಿಗೆ ರಾಜಕೀಯ ಆಶ್ರಯ ನೀಡುವವರು ಯಾರು ? ಈ ಕೊಲೆಗಳ ಹಿಂದಿನ ಪಿತೂರಿ ದಾರರು ಯಾರು, ರಾಜಕೀಯ ಫಲಾನುಭವಿಗಳು ಯಾರು ? ಎಂಬುದು ಬಯಲಾಗಬೇಕಿದೆ. ಇದರ ಸತ್ಯಗಳು ಜನತೆಯ ಅರಿವಿಗೆ ಬರಬೇಕಾಗಿದೆ. ಕೋಮುವಾದದ ವಿರುದ್ದದ ಹೋರಾಟದಲ್ಲಿ ಇದು ಬಹಳ ಪ್ರಧಾನ ಅಂಶ. ಮೂರು ದಶಕದ ಅವಧಿಯ ಈ ಎಲ್ಲಾ ಮತೀಯ ರಾಜಕಾರಣದ ಭಾಗವಾದ ಕೊಲೆ, ಪ್ರತಿಕೊಲೆಗಳನ್ನು ರಾಜ್ಯ ಸರಕಾರ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಮುನೀರ್ ಕಾಟಿಪಳ್ಳ ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಸಿಪಿಐಎಂ ರಾಜ್ಯ ನಾಯಕರಾದ ಕೆ.ಯಾದವ ಶೆಟ್ಟಿ,ದೇವಿ ಮಂಡ್ಯರವರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತ್ರತ್ವವನ್ನು ಸಿಪಿಐಎಂ ಜಿಲ್ಲಾ ನಾಯಕರಾದ ಸುನಿಲ್ ಕುಮಾರ್ ಬಜಾಲ್. ಕ್ರಷ್ಣಪ್ಪ ಕೊಂಚಾಡಿ, ಸುಕುಮಾರ್ ತೊಕ್ಕೋಟು,ಬಿ ಎಂ ಭಟ್, ಸದಾಶಿವದಾಸ್, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು,ಪ್ರಮೋಳಾ ಶಕ್ತಿನಗರ,ರಮಣಿ ಮೂಡಬಿದ್ರೆ, ಸಂತೋಷ್ ಬಜಾಲ್, ಬಿಕೆ ಇಮ್ತಿಯಾಜ್,ವಸಂತಿ ಕುಪ್ಪೆಪದವು,ಮನೋಜ್ ವಾಮಂಜೂರು,ರಫೀಕ್ ಹರೇಕಳ ಮುಂತಾದವರು ವಹಿಸಿದ್ದರು

