ಪಾವೂರು : ಗ್ರಾಮದುದ್ದಕ್ಕೂ 94 ಸಿಸಿ ಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಲ್ಯಾಂಡ್ ಮಾಫಿಯಾ, ಸರಕಾರಿ ಜಮೀನುಗಳನ್ನು ಕಬಳಿಸಿಕೊಳ್ಳುತ್ತಿದೆ. ಅಧಿಕಾರಿಗಳು ಹಗರಣಗಳಲ್ಲಿ ಭಾಗಿಯಾಗಿರುವ ಸಂಶಯವಿದ್ದು ಕಂದಾಯ ಇಲಾಖೆಯಿಂದ ತನಿಖೆ ಆರಂಭವಾಗಬೇಕಿದೆ ಎಂದು ಮಂಗಳೂರು ಮಂಡಲ ಬಿಜೆಪಿ ಕೋಶಾಧಿಕಾರಿ ಸುಮಲತಾ ಕೊಣಾಜೆ ಹೇಳಿದ್ದಾರೆ.
ಭ್ರಷ್ಟಾಚಾರ, ಸ್ವಜನಪಕ್ಷಪಾತ, ಜನವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಪಾವೂರು ಗ್ರಾಮ ಪಂಚಾಯತ್ ಮುಂಭಾಗದಲ್ಲಿ ಬಿ.ಜೆ.ಪಿ. ಪಾವೂರು ಶಕ್ತಿ ಕೇಂದ್ರದ ವತಿಯಿಂದ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾನೂನಾತ್ಮಕವಾಗಿ 2005ರ ಹಿಂದೆ ಮನೆ ಕಟ್ಟಿದವರಿಗೆ ಮಾತ್ರ 94 ಸಿಸಿ ಯನ್ನು ನೀಡಬೇಕಿದೆ. ಆದರೆ ಇದೀಗ ಹೊಸ ಕಟ್ಟಡಗಳನ್ನು ಕಟ್ಟಿದವರಿಗೂ 94 ಸಿಸಿಯನ್ನು ನೀಡಲಾಗುತ್ತಿದೆ. ಈ ಮೂಲಕ ಲ್ಯಾಂಡ್ ಮಾಫಿಯಾ ಸರಕಾರಿ ಭೂಮಿಯನ್ನು ಕಬಳಿಸುತ್ತಿರುವುದರಿಂದ ಹಲವು ವರ್ಷಗಳಿಂದ ಮನೆಗಳೆ ಇಲ್ಲದ ನಿರಾಶ್ರಿತರು ಇನ್ನು ಕೂಡ ಸ್ವಂತ ಮನೆಗಳಿಲ್ಲದೇ ಬಾಳಬೇಕಿದೆ. ಕಂದಾಯ ಇಲಾಖೆ ತಕ್ಷಣವೇ ತನಿಖೆ ಆರಂಭಿಸಬೇಕಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ನಿರ್ದೇಶನ ನೀಡಿದರೂ, ದಾನಿಗಳ ಸಹಕಾರ ಪಡೆದು ಒಂದು ಶೌಚಾಲಯವನ್ನಷ್ಟೇ ನಿರ್ಮಿಸಲಾಗಿದೆ. ಉಳಿದ ಮನೆಮಂದಿಗೆ ಈಗಲೂ ಶೌಚಾಲಯಗಳೇ ಇಲ್ಲ. ವಸತಿ ಯೋಜನೆಯಡಿ ಕಾಯ್ದಿರಿಸುವ ಕ್ರಮವೇ ಇಲ್ಲದಂತಾಗಿದೆ. 30 ವರ್ಷಗಳ ಅಭಿವೃದ್ಧಿ ಯಾವುದು ಎಂಬುದು ಗೊತ್ತಾಗುತ್ತಿಲ್ಲ ಎಂದರು.
ವಿಧಾನ ಪರಿಷತ್ ನ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು, ಬಿ.ಜೆ.ಪಿ.ಮಂಡಲ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲ್, ಯುವ ಮೋರ್ಚಾ ಅಧ್ಯಕ್ಷರಾದ ಮುರಳೀಧರ ಕೊಣಾಜೆ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದರು.
ಗ್ರಾ.ಪಂ ಸದಸ್ಯರುಗಳಾದ ದಯಾನಂದ ಕಿಲ್ಲೂರು, ಚಂದ್ರಾವತಿ ಮಜಿಕಟ್ಟ , ಶಕ್ತಿಕೇಂದ್ರದ ಅಧ್ಯಕ್ಷ ಪ್ರದೀಪ್ ಶೆಟ್ಟಿ , ಮುಖಂಡರುಗಳಾದ
ಗೋಪಾಲ್ ಪಾವೂರು, ಗ್ರಾ.ಪಂ ಮಾಜಿ ಸದಸ್ಯರಾದ ವಾಮನ್ ರಾಜ್ ಪಾವೂರು, ಯುವಮೋರ್ಛಾ ಉಪಾಧ್ಯಕ್ಷ ಪುಷ್ಪರಾಜ್ ಪಾವೂರು ಉಪಸ್ಥಿತರಿದ್ದರು.
ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಲಾಯಿತು.


