
ಬೆಂಗಳೂರು: ಮಂಜನಾಡಿ ಉರುಮನೆಕೋಡಿ ಸೀತಾರಾಮ ಪೂಜಾರಿ ಅವರ ಇಬ್ಬರು ಮಕ್ಕಳು, ತಾಯಿ ಗುಡ್ಡ ಕುಸಿದು ಸಾವನ್ನಪ್ಪಿದ ದುರಂತ ಪ್ರಕರಣಕ್ಕೆ ಸಂಬಂಧಿಸಿ ಅವೈಜ್ಞಾನಿಕ ಕಾಮಗಾರಿ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ‍್ಯದರ್ಶಿಗಳು ಸ್ಪಂಧಿಸಿ ತನಿಖೆಗೆ ಆದೇಶಿಸಿದ್ದಾರೆ.
ಉಪನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಹಾಗೂ ಪದನಿಮಿತ್ತ ಸರ್ಕಾರದ ಅಧೀನ ಕಾರ‍್ಯದರ್ಶಿ, ಪಂಚಾಯತ್ ರಾಜ್ ಇಲಾಖೆಯ ಎನ್ .ರವಿ ಕುಮಾರ್ ಇವರು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಮುಖ್ಯ ಅಭಿಯಂತರರಿಗೆ ಅಗತ್ಯ ಕ್ರಮಕ್ಕಾಗಿ ಆದೇಶ ಮಾಡಿದ್ದಾರೆ.
ಮೇ. 30 ರಂದು ಸುರಿದ ಭಾರೀ ಮಳೆಯಿಂದಾಗಿ, ಇಂಜಿನಿಯರ್ ಗಳು ನಿರ್ಲಕ್ಷ್ಯದಿಂದ , ಜೆಸಿಬಿಯಿಂದ ಅಗೆದ ಗುಡ್ಡ ಕುಸಿದಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ ಕಾಮಗಾರಿಯಿಂದ ಗುಡ್ಡದ ಮಣ್ಣು ಜರಿದು, ಮನೆ ಮೇಲೆ ಬಿದ್ದು, ಸಂಭವಿಸಿದ ಘಟನೆಯಿಂದ ತಮ್ಮ ಮಕ್ಕಳ, ತಾಯಿ ಸಾವು ಹಾಗೂ ಪತ್ನಿ ಹಾಗೂ ತಂದೆ ಕಾಲುಗಳನ್ನು ಕಳೆದುಕೊಳ್ಳುವಂತಾಗಿದ್ದು, ಇದರಿಂದ ಉಂಟಾದ ಹಾನಿಯಿಂದ ಇಂಜಿನಿಯರುಗಳ ಮೇಲೆ ತನಿಖೆ ನಡೆಸಿ ಕ್ರಮವಹಿಸಲು ಕೋರಿದ್ದರು.
ರಸ್ತೆ ಕಾಮಗಾರಿ ನಡೆಸುವಾಗ ನೇರ ಗುಡ್ಡದಿಂದ ರಸ್ತೆ ಕಾಮಗಾರಿಗಾಗಿ ಮಣ್ಣು ತೆಗೆಯುವ ಸಂದರ್ಭದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಕಡ್ಡಾಯ ಭೂವೈಜ್ಞಾನಿಕ ಪರೀಕ್ಷೆ ನಡೆಸದಿರುವುದು ದುರಂತಕ್ಕೆ ಕಾರಣವಾಗಿದೆ. ಮೈನ್ಸ್ ಆಂಡ್ ಮಿನರಲ್ಸ್ ಆಕ್ಟ್ 1957 ಪ್ರಕಾರ ಮಣ್ಣಿನ ಸ್ಥಿರತೆ ಮತ್ತು ಕುಸಿತದ ಸಂಭವನೀಯತೆಯನ್ನು ಮೌಲ್ಯಮಾಪನ ಮಾಡುವುದು ಕಾನೂನು ಬದ್ಧವಾಗಿದೆ. ಜೊತೆಗೆ ಕರ್ನಾಟಕ ಅರಣ್ಯ ಕಾಯ್ದೆ 1964ರನ್ವಯ ಮರಗಳಿದ್ದರೆ ಅರಣ್ಯ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಇದರೊಂದಿಗೆ ಕೆಲವು ಸುರಕ್ಷತೆ ಮಾನದಂಡ ನಿಯಮಗಳನ್ನು ಗ್ರಾ.ಪಂ ಮತ್ತು ಜಿಲ್ಲಾಮಟ್ಟದ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಸಂಪೂರ್ಣವಾಗಿ ಕಡೆಗಣಿಸಿದ್ದರು. ಆದ್ದರಿಂದ ಮಂಜನಾಡಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಕೆ.ಆರ್.ಐ.ಡಿ.ಎಲ್ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಬಿಎನ್ ಎಸ್ ನಡಿ 105 ಮತ್ತು 106 ಕಾಯಿದೆಯಡಿ ಕ್ರಮವಹಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಿದ್ದರು.

