


ಕೋಟೆಕಾರು, : ಜಿಲ್ಲೆಯ ಪಶ್ಚಿಮ ಭಾಗದ ಪ್ರಸಿದ್ಧ ದೈವಸ್ಥಾನ ಶ್ರೀ ಕೊಂಡಾಣ ಪಿಲಿಚಾಮುಂಡಿ ಬಂಟ ವೈದ್ಯನಾಥ ದೈವಸ್ಥಾನದಲ್ಲಿ, ಮೇ 22 ಮತ್ತು 23ರಂದು ಆಯೋಜಿತವಾದ ವರ್ಷಾವಧಿ ಕಡೇಯ ಬಂಡಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ನೂತನ ಆಡಳಿತ ಸಮಿತಿಯ ಮುಂಚೂಣಿಯಲ್ಲಿ ನಡೆದ ಈ ಬಾರಿಯ ಜಾತ್ರೆ, ಭಕ್ತರ ಭರವಸೆಗೂ, ನೂತನ ಸಮಿತಿಯ ನಿರ್ವಹಣಾ ಶೈಲಿಗೂ ಉತ್ತಮ ಮಾದರಿಯಾಯಿತು.
ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷ ಹರ್ಷರಾಜ್ ಮುದ್ಯ ಅವರ ನೇತೃತ್ವದಲ್ಲಿ ದೈವದ ಕಾರಣೀಕದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಡೇಯ ಬಂಡಿ ಅದ್ಧೂರಿಯಿಂದ ಜರಗಿತು. ಸಮಿತಿಯ ಸದಸ್ಯರಾದ ರಾಜೇಶ್ ರೈ ಕೋಟೆಕಾರುಗುತ್ತು, ಪ್ರಸಾದ್ ರೈ ಮಡ್ಯಾರ್, ವಿಶ್ವನಾಥ್ ಕುಲಾಲ್ ನಡಾರ್, ನಾರಾಯಣ ಪೂಜಾರಿ ಭೂತಹಿತ್ಲು, ಸುಭಾಷ್ ಶೆಟ್ಟಿ ಕೋಟೆಕಾರು, ಮೀರಾ ಸುಕುಮಾರ್ ಗಟ್ಟಿ ಮಾಡೂರು, ಚಾಂದಿನಿ ಮಾಡೂರು ಹಾಗೂ ಕೃಷ್ಣ ನಡಾರ್ ಅವರೂ ತಮ್ಮ ಕೈಜೋಡಿಸಿ, ಅತ್ಯಂತ ಜವಾಬ್ದಾರಿಯುತವಾಗಿ ಭಕ್ತಾಧಿಗಳನ್ನು ನಿರ್ವಹಿಸಿದರು.
ಜಾತ್ರಾ ದಿನಗಳಲ್ಲಿ ಸತತವಾಗಿ ಸುರಿದ ಮಳೆಯ ನಡುವೆಯೂ ಭಕ್ತರ ದಂಡೇ ಆಗಮಿಸಿದ್ದು, ದೈವಸ್ಥಾನ ಆವರಣ ಮಲ್ಲಿಗೆ, ಗಂಧ, ಬೂಲ್ಯ ವಿತರಣೆಯೂ ಶಿಸ್ತುಬದ್ಧವಾಗಿ ಜರಗಿತು . ಗ್ರಾಮದಿಂದ ಹಿಡಿದು ದೂರದೂರಿನ ಭಕ್ತರು ಜಾತ್ರೋತ್ಸವದಲ್ಲಿ ಭಾಗಿಯಾಗಿ ದೈವದ ವರ್ಷಾವಧಿ ಜಾತ್ರಾ ಉತ್ಸವಕ್ಕೆ ಸಾಕ್ಷಿಯಾದರು. ಈ ಭಕ್ತರ ಸೇವೆಗಾಗಿ ಸಮಿತಿ ಸಾಕಷ್ಟು ಮುಂಚಿತ ಸಿದ್ಧತೆಗಳನ್ನು ಕೈಗೊಂಡಿದ್ದು, ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ ಎಲ್ಲಾ ವ್ಯವಸ್ಥೆಗಳನ್ನೂ ಸಮರ್ಪಕವಾಗಿ ಜಾರಿಗೆ ತಂದಿತ್ತು.
ಈ ಎರಡೂ ದಿನಗಳಲ್ಲಿ ಊರ ಭಕ್ತರು ಸ್ವಯಂಸೇವಕರಾಗಿ ದುಡಿಯುತ್ತಾ ಭಕ್ತರ ನಿರ್ವಹಣೆ, ಟ್ರಾಫಿಕ್ ನಿಯಂತ್ರಣ, ಆಹಾರ ವಿತರಣೆ ಮತ್ತು ಜಲ ಸೇವಾ ವ್ಯವಸ್ಥೆ ಸೇರಿದಂತೆ ಎಲ್ಲ ವ್ಯವಸ್ಥೆಗಳಲ್ಲೂ ಸಮಿತಿಗೆ ಸಹಕಾರ ನೀಡಿದರು. ಇದರಿಂದಾಗಿ ಜಾತ್ರೆ ಯಾವುದೇ ಅಡಚಣೆ ಇಲ್ಲದೆ ಶಿಸ್ತಿನಿಂದ ಸಾಗಿದವು.
ಉತ್ಸವದ ಯಶಸ್ಸಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅಧ್ಯಕ್ಷ ಹರ್ಷರಾಜ್ ಮುದ್ಯ ಅವರು, ಇದು ನಾವೆಲ್ಲರ ಒಟ್ಟುಗೂಡಿದ ಶ್ರಮದ ಫಲ. ಭಕ್ತರ ಸೇವೆ ಹಾಗೂ ದೈವ ಸೇವೆ ನಮ್ಮ ಮೊದಲ ಆದ್ಯತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ಉತ್ಸವಗಳನ್ನು ಆಯೋಜಿಸಲು ನಾವು ಬದ್ಧರಿದ್ದೇವೆ ಎಂದು ಹೇಳಿದರು.
ವ್ಯವಸ್ಥಾಪನಾ ಸಮಿತಿಯ ಕಡೆಯಿಂದ ಉತ್ಸವದಲ್ಲಿ ಭಾಗವಹಿಸಿದ ಎಲ್ಲ ಭಕ್ತಾಧಿಗಳಿಗೆ, ಸ್ವಯಂಸೇವಕರಿಗೆ, ಸ್ಥಳೀಯ ಪೊಲೀಸ್ ಇಲಾಖೆ ಹಾಗೂ ಪಟ್ಟಣ ಪಂಚಾಯತ್ ಗೆ ಕೃತಜ್ಞತೆ ಸಲ್ಲಿಸಲಾಯಿತು.
ಈ ಮೂಲಕ ನೂತನ ಆಡಳಿತ ಸಮಿತಿಯ ಆರಂಭಿಕ ಹಂತದ ಈ ಜಾತ್ರಾ ಉತ್ಸವ ಸಮಿತಿಯ ನಿರ್ವಹಣಾ ಶಕ್ತಿಯನ್ನು ಸಾಬೀತುಪಡಿಸಿ ಭಕ್ತ ಹೃದಯದಲ್ಲಿ ಭರವಸೆ ಮೂಡಿಸಿತು.

