
ಉಳ್ಳಾಲ : ಮಕ್ಕಳಲ್ಲಿ ಶಾಸ್ತ್ರೀಯ ನೃತ್ಯಕಲೆಗಳ ಅಭಿರುಚಿ ಮೂಡಿಸಬೇಕಾದ ಅಗತ್ಯ ಇದೆ. ಯಕ್ಷಗಾನದಂತೆ ಕರಾವಳಿಯಲ್ಲಿ ಭರತನಾಟ್ಯ ಕಲೆಯೂ ವಿಜೃಂಭಿಸಿ ಎಲ್ಲ ಆದರ, ಗೌರವಕ್ಕೆ ಪಾತ್ರವಾಗಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಆಶಿಸಿದರು. ಇಲ್ಲಿನ ಸೋಮೇಶ್ವರ ಕೊಲ್ಯದ ನಾಟ್ಯನಿಕೇತನ (ರಿ.) ವತಿಯಿಂದ ಕರ್ನಾಟಕ ರಾಜ್ಯೋತ್ಸವ ಮತ್ತು ಶಾಂತಲಾ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಕಲಾತಿಲಕ, ನಾಟ್ಯಾಚಾರ್ಯ ಉಳ್ಳಾಲ
ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆ ಪ್ರಯುಕ್ತ ನಾಟ್ಯ ನಿಕೇತನದ ನೃತ್ಯಾಂಗಣದಲ್ಲಿ ಶುಕ್ರವಾರ ನಡೆದ ‘ನಾಟ್ಯ ಮೋಹನ ನವತ್ಯುತ್ಸವ’ ನೃತ್ಯಶ್ರೀ ಸರಣಿ ಮಾಲಿಕೆ-14ರ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುಮಾರು 1930ರ ದಶಕದಿಂದೀಚೆಗೆ ಕರಾವಳಿಯಲ್ಲಿ ಭರತನಾಟ್ಯ ಬೆಳಗುವುದಕ್ಕೆ ಆರಂಭವಾಯಿತು. ಈ ಅವಧಿಯಲ್ಲಿ ಭರತನಾಟ್ಯ ಪರಂಪರೆ ಮತ್ತು ಬೆಳವಣಿಗೆಗೆ ಅಚ್ಚರಿ ಹುಟ್ಟಿಸುವಂತೆ ಮಾಡಿದೆ. ತಮಿಳುನಾಡಿನ ಪಂದನಲ್ಲೂರು ಶೈಲಿಯನ್ನು ಇಲ್ಲಿ ಪರಿಚಯಿಸಿ ಜನಪ್ರಿಯಗೊಳಿಸುವಲ್ಲಿ ಉಳ್ಳಾಲ ಮೋಹನ್ ಕುಮಾರ್‌ರ ಪಾತ್ರ ಹಿರಿದು. ಅವರ ಬದುಕು,
ವ್ಯಕ್ತಿತ್ವ, ನಾಟ್ಯವನ್ನೇ ಉಸಿರಾಗಿಸಿದ ಜೀವನ ಎಲ್ಲರಿಗೆ ಮೇಲ್ಪಂಕ್ತಿಯಾಗಿದೆ. ಇಂತಹ ಸರಣಿ ಕಾರ್ಯಕ್ರಮ ಇನ್ನಷ್ಟು ಮುಂದುವರಿಯಬೇಕು. ಎಲ್ಲ ಕಡೆಗಳಲ್ಲೂ ಇಂತಹ ಕಾರ್ಯಕ್ರಮಗಳು ನಡೆಯಬೇಕು ಎಂದರು.
ನಾಟ್ಯಾಚಾರ್ಯ ಗುರು ಉಳ್ಳಾಲ ಮೋಹನ್ ಕುಮಾರ್ ಮಾತನಾಡಿ, ನೃತ್ಯಗುರು ಎಂದು ಹೇಳಿಸಿಕೊಂಡಲ್ಲಿಂದ ಇಲ್ಲಿವರೆಗೆ ಕಲಿಸುವುದು ಮಾತ್ರವಲ್ಲ ಕಲಿಯುತ್ತಲೇ ಬಂದಿದ್ದೇನೆ. ಭರತನಾಟ್ಯ ಶಾಸ್ತ್ರೀಯವಾಗಿ ಹೇಗೆ ಇರಬೇಕು ಹಾಗೆಯೇ ಪ್ರದರ್ಶನದಲ್ಲೂ ಕಾಣಬೇಕು. ಈ ಸನಾತನ ಕಲೆಯನ್ನು ಉಳಿಸುವ ಶಕ್ತಿ ಎಲ್ಲರಲ್ಲೂ ಬರಬೇಕು ಎಂದರು.
ಈ ಸಂದರ್ಭ ಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಮತ್ತು ಅವರ ಪುತ್ರಿ, ನಾಟ್ಯನಿಕೇತನ ನಿರ್ದೇಶಕಿ ಕರ್ನಾಟಕ ಕಲಾಶ್ರೀ ವಿದುಷಿ ರಾಜಶ್ರೀ ಉಳ್ಳಾಲ್ ಅವರಿಗೆ ಹಿರಿಯ ಶಿಷ್ಯೆ, ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಇದರ ಸಂಸ್ಥಾಪಕಿ ವಿದುಷಿ ಶಾಲಿನಿ ಆತ್ಮಭೂಷಣ್ ಅವರು ಗೌರವಾರ್ಪಣೆ ನೆರವೇರಿಸಿದರು. ಇದೇ ಸಂದರ್ಭ ಹಿರಿಯ ಶಿಷ್ಯೆ ವಿದುಷಿ ಶಾಲಿನಿ ಆತ್ಮಭೂಷಣ್, ಡಾ.ಧನಂಜಯ ಕುಂಬ್ಳೆ ಇವರನ್ನು ನಾಟ್ಯನಿಕೇತನ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ನಾಟ್ಯನಿಕೇತನದ ಹಿರಿಯ ಶಿಷ್ಯೆ ವಿದುಷಿ ಶಾಲಿನಿ ಆತ್ಮಭೂಷಣ್ ಅವರಿಂದ ಭರತನಾಟ್ಯ ಪ್ರದರ್ಶನಗೊಂಡಿತು.
ನಟುವಾಂಗದಲ್ಲಿ ವಿದುಷಿ ಸುಖದ ಬರ್ವೆ, ಹಾಡುಗಾರಿಕೆಯಲ್ಲಿ ವಿದ್ವಾನ್ ಕೃಷ್ಣಾಚಾರ್ ಪಾಣೆಮಂಗಳೂರು, ಮೃದಂಗದಲ್ಲಿ
ವಿದ್ವಾನ್ ಬಾಲಕೃಷ್ಣ ಪುತ್ತೂರು, ಕೊಳಲಿನಲ್ಲಿ ವಿದ್ವಾನ್ ಕೃಷ್ಣಗೋಪಾಲ್ ಪುತ್ತೂರು ಸಹಕರಿಸಿದರು.
ವಿದ್ವಾನ್ ಶ್ರೀಧರ ಹೊಳ್ಳ ಸ್ವಾಗತಿಸಿ, ನಿರೂಪಿಸಿದರು. ವಿದುಷಿ ರಾಜಶ್ರೀ ಉಳ್ಳಾಲ್ ವಂದಿಸಿದರು.


