ಕೊಣಾಜೆ: ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ಧರ್ಮರಸರ ಮಾಡ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಉಳ್ಳಾಲ್ತಿ ಅಮ್ಮನ ಮುಗ ಹಾಗೂ ಧರ್ಮ ಅರಸರ ಕಿರುವಾಳ್ ಭಂಡಾರದ ಪ್ರತಿಷ್ಠಾ ಕಲಾಷಾಭಿಷೇಕ ಮತ್ತು ಉಳ್ಳಾಲ್ತಿ ಧರ್ಮ ಅರಸರ ‘ಧರ್ಮನಡಾವಳಿ’ ಮಹೋತ್ಸವ ಮಾರ್ಚ್ ನಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಭಾನುವಾರ ಪಟ್ಟೋರಿ ಉಳ್ಳಾಲ್ತಿ ಕ್ಷೇತ್ರದ ಕೆರೆಯ ಸಮೀಪ ನಡೆಯಿತು.
ಕೊಣಾಜೆ ಬೀಡುವಿನ ತಿರುಮಲೇಶ್ವರ ಭಟ್ ಹಾಗೂ ಧರ್ಮ ನಡಾವಳಿ ಸಮಿತಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಶೆಟ್ಟಿ ಪುಲ್ಲು ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕಾರ್ಯಾಧ್ಯಕ್ಷರಾದ ಪ್ರಶಾಂತ್ ಕಾಜವ ಅವರು ಮಾತನಾಡಿ, ಈ ಪಟ್ಟೋರಿಯ ನೆಲದಲ್ಲಿ 490 ವರ್ಷಗಳ ಹಿಂದೆ ನಡೆಯುತ್ತಿದ್ದ ಧರ್ಮ ನಡಾವಳಿಯು ಈಗ ಮತ್ತೆ ಗ್ರಾಮಸ್ಥರ ಸಹಕಾರದೊಂದಿಗೆ ನಡೆಯುತ್ತಿರುವುದು ನಮ್ಮೆಲ್ಲರ ಪುಣ್ಯ, ಭಾಗ್ಯವಾಗಿದೆ. ಸಾನಿಧ್ಯ ಶಕ್ತಿಯಿಂದ ಮಾರ್ಚ್ ನಲ್ಲಿ ನಡೆಯಲಿರುವ ಧರ್ಮ ನಡಾವಳಿಯ ಧಾರ್ಮಿಕ ಕಾರ್ಯವು ದೈವ ದೇವರ ಕೃಪೆಯಿಂದ ಯಶಸ್ವಿಯಾಗಿ ನಡೆಯಲಿದೆ ಜೊತೆಗೆ ಕ್ಷೇತ್ರವೂ ಅಭಿವೃದ್ಧಿಯಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಗಡಿಪ್ರಧಾನರಾದ ತಿಮ್ಮಯ್ಯ ಕಾಜವ ಯಾನೆ ದಿವಾಕರ ಭಂಡಾರಿ, ಗೌರವ ಸಲಹೆಗಾರರಾದ ಶ್ರೀನಿವಾಸ ಶೆಟ್ಟಿ ಪುಲ್ಲು, ಶ್ರೀನಿವಾಸ ಕಾಜವ ಪಟ್ಟೋರಿ, ವಿಜೇತ್ ಶೆಟ್ಟಿ ಮಂಜನಾಡಿ,ಕೋಶಾಧಿಕಾರಿ ಕರುಣಾಕರ ಕಾನ, ನಾಗಬ್ರಹ್ಮ ಭಜನಾ ಮಂಡಳಿ ಅಧ್ಯಕ್ಷರಾದ ದಿನೇಶ್ ಕಲಾಯಿ, ಮಹಿಳಾ ಸಮಿತಿ ಅಧ್ಯಕ್ಷರಾದ ನಿಶಾ ರವಿ ಕಾನ ಹಾಗೂ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಪಟ್ಟೋರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಸಂಚಾಲಕ ಪ್ರವೀಣ್ ಪಟ್ಟೋರಿ ವಂದಿಸಿದರು. ಬಳಿಕ ಉಳ್ಳಾಲ್ತಿ ಕೆರೆಯ ಬಳಿ ಗ್ರಾಮಸ್ಥರಿಂದ ಶ್ರಮದಾನ ಕಾರ್ಯ ನಡೆಯಿತು.


