

ಮಂಗಳೂರು ಕ್ಷೇತ್ರದಲ್ಲಿ ಮುಖಂಡರಾದವರೆಲ್ಲರೂ ವೈಯಕ್ತಿಕ ಭಾವನೆಗಳು ಏನೇ ಇದ್ದರೂ ಮತದಾರರಿಗೋಸ್ಕರ , ಕಾರ್ಯಕರ್ತರಿಗೋಸ್ಕರ , ಎಲ್ಲರೂ ಒಬ್ಬರಿಗೊಬ್ಬರು ಒಟ್ಟಾಗಿ ದೀಪವನ್ನು ಹಚ್ಚುವ ಕೆಲಸ ಮಾಡೋಣ ಎಂದು ಸಂಸದ ಕ್ಯಾ| ಬೃಜೇಶ್ ಚೌಟ ಹೇಳಿದ್ದಾರೆ.
ಅಸೈಗೋಳಿಯ ಬಂಟರ ಭವನದಲ್ಲಿ ನಡೆದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಸಂಘಟನಾ ಪರ್ವ ಸಭೆಯಲ್ಲಿ ಮಂಗಳೂರು ಮಂಡಲದ ಅಧ್ಯಕ್ಷರಾಗಿ ಮರು ಆಯ್ಕೆಗೊಂಡ ಜಗದೀಶ್ ಆಳ್ವ ಕುವೆತ್ತಬೈಲ್ ಅವರ ಅಧಿಕಾರ ಹಸ್ತಾಂತರ ನೆರವೇರಿಸಿ ಮಾತನಾಡಿದರು.

ಮಂಗಳೂರು ಕ್ಷೇತ್ರವೆಂದಲ್ಲಿ ಸ್ವಾಭಿಮಾನವನ್ನು ಉಳಿಸುವ ಕ್ಷೇತ್ರ. ಮಂಗಳೂರು ಕ್ಷೇತ್ರದ ಕಾರ್ಯಕರ್ತರಿಗೆ ಸವಾಲಿನ ಕ್ಷೇತ್ರ. ಕಾಂಗ್ರೆಸ್ ವರ್ಸಸ್ ಬಿಜೆಪಿಯ ಕ್ಷೇತ್ರವಲ್ಲ . ರಾಷ್ಟ್ರೀಯತೆಯ ಪರವಾಗಿ ಮತ್ತು ರಾಷ್ಟ್ರೀಯತೆಯ ವಿರುದ್ಧವಾಗಿ ಇರುವಂತಹ ವ್ಯಕ್ತಿಗಳ ಮಧ್ಯದ ಹೋರಾಟದ ಕ್ಷೇತ್ರವಾಗಿದೆ. ಹಿಂದುತ್ವದ ಪರ ಹಾಗೂ ಹಿಂದುತ್ವದ ವಿರುದ್ಧವಾಗಿರುವಂತಹ ಜನರ ನಡುವಿನ ಕ್ಷೇತ್ರವಾಗಿದೆ. ಹಾಗಾಗಿ ವೈಯಕ್ತಿಕ ಭಾವನೆಗಳು ಏನೇ ಇದ್ದರೂ, ಒಗ್ಗಟ್ಟಾಗಿ ಹೋಗುವ ಕೆಲಸವಾಗಬೇಕಿದೆ. ಜನ ದೊಡ್ಡ ಸಂಖ್ಯೆಯಲ್ಲಿ ಮತ ನೀಡಿದ್ದಾರೆ. ಒಂದಾಗಿ ಒಟ್ಟಾಗಿ ಯೋಚನೆ ಮಾಡುವಂತಹ ಕೆಲಸವನ್ನು ಮಾಡಬೇಕು.
ಚುನಾವಣೆಯಲ್ಲಿ ಸ್ಪರ್ಧೆ ಮಾಡಿದವರು, ಜನಪ್ರತಿನಿಧಿಗಳಾಗಿದ್ದವರು, ಸಹಕಾರಿ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ಜವಾಬ್ದಾರಿ ನಿಭಾಯಿಸಿದವರು. ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡಿದವರು ಎಲ್ಲರನ್ನೂ ಒಂದಾಗಿ ಒಗ್ಗಟ್ಟಾಗಿ ಕೊಂಡೊಯ್ಯುವಂತಹ ಕೆಲಸ ಆಗಬೇಕಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಜಗದೀಶ್ ಆಳ್ವ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ ಕೆಲಸವನ್ನು ಮಾಡಬೇಕಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ತ್ಯಾಗದ ಮುಖೇನ ಬಿಜೆಪಿ ಪಕ್ಷದ ಉದಯವಾಗಿದೆ. ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂದರೂ ಅಲ್ಲ ಅನ್ನುವ ಮುಸಲ್ಮಾನರ ಓಲೈಕೆಯೊಂದಿಗಿನ ಧೋರಣೆಯ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ಸಿಗರು ರಾಜಾರೋಷವಾಗಿ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ತೆಗೆಯುವ , ಮತಾಂತರ ನಿಷೇಧ ಕಾಯಿದೆ ವಾಪಸ್ ತೆಗೆಯುವ ಘೋಷಣೆಗಳನ್ನು ಹಾಕುತ್ತಲೇ ಇದ್ದರು. ಆದರೆ ಉತ್ತರ ಕರ್ನಾಟಕ ಭಾಗದ ಜನತೆ ಬಿಟ್ಟಿಭಾಗ್ಯಕ್ಕೆ ಮನಸೋತು ನಮ್ಮನ್ನು ನಾವು ಮಾರಿಕೊಂಡಂತಾಗಿದೆ. ಸಿಟಿ ರವಿಯವರ ಮೇಲೆ ಹಲ್ಲೆಯೊಂದಿಗೆ ಪೊಲೀಸ್ ದೌರ್ಜನ್ಯವನ್ನು ಕಂಡಾಗ ಬ್ರಿಟೀಷರ ಕಾಲದಲ್ಲಿದ್ದೇವೆ ಅನ್ನುವ ಸ್ಥಿತಿಯಿದೆ. ಸರಕಾರ ಬಂದಲ್ಲಿ ಮಾತ್ರ ದೇಶವನ್ನು ಪರಮವೈಭವ ಸ್ಥಿತಿಗೆ ಕೊಂಡೊಯ್ಯಲು ಸಾಧ್ಯ ಎಂಬುದನ್ನು ಎಲ್ಲಾ ಹಿಂದೂಗಳು ಅರ್ಥೈಸಬೇಕಿದೆ ಎಂದರು.
ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ ಮಾತನಾಡಿ, ಮತ್ತೆ ಅಧ್ಯಕ್ಷನಾಗಲು ಕ್ಷೇತ್ರದ ಕಾರ್ಯಕರ್ತರು ತನ್ನ ಮೇಲಿಟ್ಟ ಪ್ರೀತಿಯ ಸಾಕ್ಷಿಯಾಗಿದೆ. ಅಸೌಖ್ಯದಿಂದ ಇದ್ದ 11 ತಿಂಗಳ ಅವಧಿಯಲ್ಲೂ ಕಚೇರಿ ಸಿಬ್ಬಂದಿಯಿಂದ ಹಿಡಿದು ಎಲ್ಲಾ ಮೋರ್ಛಾದ ಮುಖಂಡರು ಸಹಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಿಗೆ ಸ್ಪಂಧಿಸಲು ಸಾಧ್ಯವಾಯಿತು ಎಂದರು. ಜಿಲ್ಲೆಯ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು ರವರು ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಜಗದೀಶ್ ಆಳ್ವ ಕುವೆತ್ತಬೈಲ್ ಹೆಸರನ್ನು ಘೋಷಣೆ ಮಾಡಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ. ಅಧ್ಯಕ್ಷರಾದ ಸತೀಶ್ ಕುಂಪಲ, ಸಂಘಟನಾ ಪರ್ವ ಜಿಲ್ಲಾ ಸಹ ಚುನಾವಣಾಧಿಕಾರಿ ವಿಕಾಸ್ ಪುತ್ತೂರು, ಸಾಜ ರಾಧಾಕೃಷ್ಣ ಆಳ್ವ, ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರಧಾನ ಕಾರ್ಯದರ್ಶಿಗಳಾದ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್, ಕಾರ್ಯದರ್ಶಿ ದಿನೇಶ್ ಅಮ್ಟೂರು, ವಕ್ತಾರ ರಾದ ಮೋಹನ್ ರಾಜ್ ಕೆ.ಆರ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸದರಾದ ಕ್ಯಾ. ಬೃಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಮತ್ತು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಆಳ್ವ ಕುವತ್ತಬೈಲ್ ರವರನ್ನು ಅಭಿನಂದಿಸಲಾಯಿತು. ಸ್ಥಳೀಯ ಸಂಸ್ಥೆಗಳಿಗೆ ಮತ್ತು ಸಹಕಾರಿ ಸಂಸ್ಥೆಗಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕಾರ್ಯಕರ್ತರನ್ನು ಗೌರವಿಸಲಾಯಿತು.
ಮಂಡಲದ ಪ್ರಧಾನ ಕಾರ್ಯದರ್ಶಿ ಗಳಾದ ದಯಾನಂದ ತೊಕ್ಕೊಟ್ಟು ಸ್ವಾಗತಿಸಿದರು, ಸುಜೀತ್ ಮಾಡೂರು ವಂದಿಸಿದರು. ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಕಾರ್ಯಕ್ರಮ ನಿರೂಪಿಸಿದರು.


