

ಮಂಗಳೂರು: ಮಾದಕವ್ಯಸನಗಳು ಯುವಕರ ಭವಿಷ್ಯ ನಾಶಗೊಳಿಸುವ ಗಂಭೀರ ಸಮಸ್ಯೆಯಾಗಿದೆ. ಇದರಿಂದ ದೂರವಿರುವುದು ಅನಿವಾರ್ಯ. ಸ್ನೇಹಿತರುದ ಮಾದಕ ವಸ್ತುಗಳಿಂದ ದೂರವಿರುವಂತೆ ಎಚ್ಚರಿಕೆ ವಹಿಸಿ. ಈ ಕುರಿತು ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ ಸದಾ ಜನರೊಂದಿಗೆ ಇದೆ ಎಂದು ಉಡುಪಿ ಕರಾವಳಿ ಕಾವಲು ಪಡೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅಭಿಪ್ರಾಯಪಟ್ಟರು.
ಅವರು ನಡುಮೊಗೇರು ಗ್ಯಾರೇಜ್ ಮಾಲಕರ ಸಭಾಭವನದಲ್ಲಿ ಜರಗಿದ ಭಾರತ ಸರ್ಕಾರ ಯುವ ಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಪೊಲೀಸ್ ಇಲಾಖೆ, ಜಿ.ಎಂ.ಸ್ಪೋರ್ಟ್ಸ್ ಕ್ಲಬ್, ಸಂಗಮ್ ಫ್ರೆಂಡ್ಸ್ ಸರ್ಕಲ್ , ಗ್ಯಾರೇಜು ಮಾಲಕರ ಸಂಘ, ಸುಬ್ರಹ್ಮಣ್ಯ ಸ್ಪೋರ್ಟ್ಸ್ ಕ್ಲಬ್ ತೋಕೂರು ಸಹಕಾರದಿಂದ ಜರಗಿದ ಮಾದಕ ವ್ಯಸನ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ಎಚ್.ಪಿ ತಿಮ್ಮಯ್ಯ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ವೈದ್ಯಾಧಿಕಾರಿ ಸುಜಯ್ ಭಂಡಾರಿ ಮಾದಕವ್ಯಸನದ ದುಷ್ಪರಿಣಾಮಗಳ ವಿವರ ನೀಡಿದರು.
ಮುಖ್ಯ ಅತಿಥಿಗಳಾಗಿ ಸುಧಾಕರ್ ಜೆ., ಎಮ್.ದಿವಾಕರ್, ಮುರಳೀಕೃಷ್ಣ, ಎ.ಜನಾರ್ಧನ, ದಿನಕರ್ ಕುಲಾಲ್ ಮುಂತಾದವರು ಉಪಸ್ಥಿತರಿದ್ದರು.
ಜಿ.ಎಂ.ಸ್ಪೋರ್ಟ್ಸ್ ಕ್ಲಬ್ ನ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಸ್ವಾಗತಿಸಿದರು. ನೆಹರು ಯುವಕೇಂದ್ರದ ಅಧಿಕಾರಿ ಜಗದೀಶ್ ಪ್ರಸ್ತಾವನೆಗೈದರು. ಸಂಗಮ್ ಫ್ರೆಂಡ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ಶ್ರೀನಿವಾಸ್ ಕೆ ವಂದಿಸಿದರು. ಕೃಷ್ಣ ಶ್ರೀಯಾನ್ ನಿರೂಪಿಸಿದರು. ಈ ಸಂದರ್ಭ ಯುವಕರಿಗೆ ಸಂವಾದ ಮತ್ತು ರಸಪ್ರಶ್ನೆ ನಡೆಯಿತು.

