ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಉಳ್ಳಾಲ: ಉಳ್ಳಾಲ ಸ್ವಚ್ಛನಗರವನ್ನಾಗಿಸಲು ಎಲ್ಲಾ ಖಾಸಗಿ ಸಂಸ್ಥೆಗಳ ಸಹಕಾರ ಅಗತ್ಯ, ಈ ಮೂಲಕ ಜನರಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಉಳ್ಳಾಲ ನಗರಸಭೆಯ ಪೌರಾಯುಕ್ತೆ ರೂಪಾ.ಟಿ.ಶೆಟ್ಟಿ ಹೇಳಿದ್ದಾರೆ.
ಅವರು ಉಳ್ಳಾಲದ ಕೆ.ಪಾಂಡ್ಯರಾಜ್ ಬಳ್ಳಾಲ್ ಶಿಕ್ಷಣ ಸಂಸ್ಥೆಗಳು, ನರ್ಸಿಂಗ್ ಕಾಲೇಜು ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಉಳ್ಳಾಲ ನಗರಸಭೆ ಜಂಟಿ ಆಶ್ರಯದಲ್ಲಿ ಉಳ್ಳಾಲದ ಅಬ್ಬಕ್ಕ ವೃತ್ತದಿಂದ ಮಾಸ್ತಿಕಟ್ಟೆವರೆಗೆ ನಡೆದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ಅನುಷ್ಠಾನಕ್ಕೆ ತಂದಿರುವ ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಉಳ್ಳಾಲ ನಗರವನ್ನು ಸ್ವಚ್ಛನಗರವನ್ನಾಗಿಸಲು ಎಲ್ಲರೂ ಪ್ರಯತ್ನಿಸಬೇಕು. ಇಂತಹ ಕಾರ್ಯದಲ್ಲಿ ಖಾಸಗಿ ಸಂಸ್ಥೆಗಳು ಇನ್ನಷ್ಟು ಕೈಜೋಡಿಸಬೇಕಿದೆ ಎಂದರು.
ಸ್ವಚ್ಛ ಭಾರತ ಅಭಿಯಾನದ ಉಳ್ಳಾಲ ನಗರಸಭೆಯ ರಾಯಭಾರಿ ಮಾಧವ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ಕೆ.ಪಾಂಡ್ಯರಾಜ್ ಬಳ್ಳಾಲ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷೆ ಪ್ರಿಯಾ ಬಲ್ಲಾಳ್, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಖೈನಿ ಸಿಸಿಲಿಯಾ, ಪಿ.ಯು.ಸಿ ಕಾಲೇಜಿನ ಪ್ರಾಂಶುಪಾಲೆ ಶರ್ಮಿಳಾ ರಾವ್, ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜನಾಧಿಕಾರಿ ಚೈತ್ರಾ ನಾಯಕ್, ಉಳ್ಳಾಲ ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಜಯಶಂಕರ್ ಪ್ರಸಾದ್, ಕಿರಿಯ ಆರೋಗ್ಯ ನಿರೀಕ್ಷಕ ರಾಜೇಶ್.ಕೆ.ಹೆಗ್ಡೆ ಉಪಸ್ಥಿತರಿದ್ದರು.


