

ತೊಕ್ಕೊಟ್ಟು: ಜೀವಹಾನಿಯನ್ನು ತಪ್ಪಿಸುವ, ಜೀವದಾನ, ಪುನರ್ಜನ್ಮ ನೀಡುವಂತಹ ಚೈತನ್ಯ ಇರುವಂತಹ ತುರ್ತು ವಾಹನ ಆಂಬ್ಯುಲೆನ್ಸ್ . ಅದನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ಪ್ರಾಣಾಸ್ತ್ರ ಟ್ರಸ್ಟ್ ಶ್ರೇಷ್ಟ ಕಾರ್ಯವನ್ನು ಸಮಾಜಕ್ಕೆ ನೀಡಿದೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮಾಜಮುಖಿಯಾಗಿ ಬಂದಂತಹ ಸಂಪತ್ತನ್ನು ಸಮಾಜಕ್ಕೆ ನೀಡುವುದು ಶ್ರೇಷ್ಟ ಕಾರ್ಯ. ಸುಮರಸರು ಸುಮನಸ್ಸಿನಿಂದ ಕೊಟ್ಟ ಪುಷ್ಪದಂತೆ ಉತ್ತಮ ಕಾರ್ಯಕ್ಕೆ ಮಳೆಯ ಸಿಂಚನವಾಗಿದೆ. ಉತ್ತಮ ಕೆಲಸಕ್ಕೆ ವಿಘ್ನಗಳು ಅನೇಕವಿರುವುದು, ಅದನ್ನು ಎದುರಿಸುವುದೇ ಆತ್ಮಸ್ಥೈರ್ಯ. ಅದನ್ನು ಪ್ರಾಣಾಸ್ತ್ರ ಟ್ರಸ್ಟ್ ಮತ್ತು ವಿ.ಹಿಂ.ಪ-ಬಜರಂಗದಳ ವಾಸುಖಿ ಶಾಖೆ ಮಾಡಿ ತೋರಿಸಿದೆ. ದೇಶವ್ಯಾಪಿ, ರಾಷ್ಟ್ರವ್ಯಾಪಿ ಅಖಿಲ ಭಾರತ ವ್ಯವಸ್ಥೆಯಲ್ಲಿಯೂ ವಿ.ಹಿಂ.ಪ ಜಗತ್‌ವ್ಯಾಪಿ ಇರುವ ಸಂಘಟನೆಯಾಗಿದೆ. ಇದರಿಂದ ಹಿಂದೂ ಸಮಾಜ ಆತ್ಮವಿಶ್ವಾಸದಿಂದ ಬಾಳುವ ವಾತಾವರಣ ನಿರ್ಮಾಣವಾಗಿದೆ. ಲೋಕದುದ್ದಕ್ಕೂ ಸಮಾಜ ವ್ಯವಸ್ಥೆಯನ್ನು ಸದೃಢಗೊಳಿಸಬೇಕು, ನಿರಾಶ್ರಿತರ ಅವಶ್ಯಕತೆಯನ್ನು ಪೂರೈಸಬೇಕು ಅನ್ನುವ ಉದ್ದೇಶವನ್ನಿಟ್ಟುಕೊಂಡಿರುವ ಅಸ್ತ್ರ ಗ್ರೂಪ್ ನ ಪ್ರಾಣಾಸ್ತ್ರ ಟ್ರಸ್ಟ್ ವಿ.ಹಿಂ.ಪ-ಬಜರಂಗದಳ ಜೊತೆಗೆ ಕೈಜೋಡಿಸಿರುವುದು ಉತ್ತಮವಾದ ಕಾರ್ಯ ಎಂದರು.
ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ಮಾತನಾಡಿ ಆಂಬ್ಯುಲೆನ್ಸ್ ವಾಹನಕ್ಕೆ ಎಂಟು ಲಕ್ಷ ಖರ್ಚು ಮಾಡಿ ಲಾಂಚೂ ಅವರ ಹೆಸರೇ ಬರೆಯಬಹುದಿತ್ತು.ಆದರೆ ಅವರು ತಾವು ಕಾರ್ಯಾಚರಿಸುತ್ತಿರುವ ಸಂಘಟನೆಗೆ ಅರ್ಪಿಸಿದ್ದಾರೆ.ಬಜರಂಗದಳದವರು ಸೇವಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಕೊರೊನ ಸಂದರ್ಭದಲ್ಲಿ ತಮ್ಮವರೇ ಆಸ್ಪತ್ರೆ ದಾಖಲಾದರೆ, ಮೃತಪಟ್ಟರೆ ನೋಡಲು ಹೆದರುತ್ತಿದ್ದರು. ಆದರೆ ಬಜರಂಗದಳ ಸಂಘಟನೆಯ ಸದಸ್ಯರು ತಾವು ಸತ್ತರೂ ಪರವಾಗಿಲ್ಲವೆಂದು ಪರರಿಗಾಗಿ ಶಕ್ತಿ ಮೀರಿ ದುಡಿದರು.ಬಜರಂಗದಳ-ವಿ.ಹಿಂ.ಪ ಸೇವೆಯ ಜೊತೆ ಹಿಂದೂ ಸಮಾಜಕ್ಕೆ ತೊಂದರೆ ಆದಾಗ ಹೋರಾಟ ಮಾಡುತ್ತಾ ಬಂದಿದೆ.ಇಡೀ ದೇಶದಲ್ಲಿ ಹಿಂದೂ ಸಮಾಜವನ್ನು ಗುರಿಯಾಗಿಸಿ ಸಂಚು ನಡೆಯುತ್ತಿದೆ .ದೇಶ ಮಾತ್ರವಲ್ಲದೆ ವಿಶ್ವದಾದ್ಯಂತ ಹಿಂದೂಗಳು ಟಾರ್ಗೆಟ್ ಆಗುತ್ತಿದ್ದಾರೆ.ಧರ್ಮದ ಪರವಾಗಿ ಮಾತನಾಡುವವರನ್ನು ಗುರಿಯಾಗಿಸುತ್ತಿದ್ದಾರೆ.ಅರುಣ್ ಉಳ್ಳಾಲ್ ಅವರ ಕೆಲಸ ಶ್ಲಾಘನೀಯ.ಕೇಸು ಹಾಕಿದರೂ ಮಕ್ಕಳಿಗೆ ಧರ್ಮ ಶಿಕ್ಷಣ ನೀಡುತ್ತಿದ್ದಾರೆ.ಕೇಸು ಹಾಕುವ ಯಾವುದೇ ವಿಚಾರವಿರಲಿಲ್ಲ. ಬಾಂಗ್ಲ ಸ್ಥಿತಿ ಕರ್ನಾಟಕಕ್ಕೂ ಬರಬಹುದೆಂಬ ಐವನ್ ಡಿಸೋಜರ ಮೇಲೆ ಕೇಸ್ ಹಾಕಿಲ್ಲ, ಇಡೀ ಭೂಮಿ ತಮ್ಮ ಸಮುದಾಯದ ಸ್ವತ್ತು ಅಂದ ಝಮೀರ್ ಖಾನ್ ನ ಮೇಲೂ ಪ್ರಕರಣ ದಾಖಲಿಸಿಲ್ಲ. ಇಂತಹ ದ್ವಂದ್ವ ನೀತಿಗಳ ವಿರುದ್ಧ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ತೊಕ್ಕೊಟ್ಟು ಅಂಬಾವನ ಧರ್ಮ ಶಿಕ್ಷಣ ಕೇಂದ್ರದ ಪ್ರದಾನ ಸಂಚಾಲಕರಾದ ಅರುಣ್ ಉಳ್ಳಾಲ್ ಮಾತನಾಡಿ ತೊಕ್ಕೊಟ್ಟು ಭಾಗದಲ್ಲಿ ಶವ ಸಂಸ್ಕಾರಕ್ಕೆ ಬೇರೆಯವರ ವಾಹನಕ್ಕೆ ಪರಾವಲಂಬನೆಯಾಗಿದ್ದೆವು. ಸಮಾಜದ ಕೊರತೆಯನ್ನು ಅರಿತು ಲಾಂಚು ಲಾಲ್ ಆಂಬ್ಯುಲೆನ್ಸ್ ದಾನ ನಡೆಸಿರುವುದು ಮಹತ್ತರವಾದ ಕಾರ್ಯ. ಶವಸಂಸ್ಕಾರದ ಸಂದರ್ಭ ಮೃತದೇಹ ಸ್ನಾನ ಮಾಡಿಸುವ ವೇಳೆ ಟೆಂಟ್ ವ್ಯವಸ್ಥೆ ಕಲ್ಪಿಸಿದಲ್ಲಿ ಬಹಳ ಉತ್ತಮ, ಅಂತಿಮ ಸಂಸ್ಕಾರದ ವೇಳೆ ಭಜನೆಗೆ ಪರದಾಡುವ ಸ್ಥಿತಿಯಿದೆ. ಆಂಬ್ಯುಲೆನ್ಸ್ ಬುಕ್ ಮಾಡುವ ಸಂದರ್ಭ ಭಜನೆಯನ್ನು ಬುಕ್ ಮಾಡುವ ವ್ಯವಸ್ಥೆ ಆಗಬೇಕಿದೆ ಎಂದರು.
ಪ್ರಾಣಾಸ್ತ್ರ ಟ್ರಸ್ಟ್ ಹಾಗೂ ಅಸ್ತ್ರ ಗ್ರೂಪ್ ನ ಅಧ್ಯಕ್ಷ ಲಾಂಚೂಲಾಲ್ ಅಧ್ಯಕ್ಷತೆ ವಹಿಸಿದ್ದರು.ವಿ.ಹಿಂ.ಪ ಪ್ರಾಂತ ಸಹಸೇವಕ್ ಪ್ರಮುಖ್ ಗೋಪಾಲ ಕುತ್ತಾರ್, ಪ್ರಾಂತ ಬಜರಂಗದಳ ಸಹ ಸಂಚಾಲಕರಾದ ಭುಜಂಗ ಕುಲಾಲ್,ವಿಹಿಂಪ ಉಳ್ಳಾಲ ನಗರ ಪ್ರಖಂಡ ಅದ್ಯಕ್ಷ ನಾರಾಯಣ ಕುಂಪಲ, ಮಂಗಳೂರು ಮಹಾನಗರ ಪಾಲಿಕೆಯ ಮಹಾ ಪೌರರಾದ ಮನೋಜ್ ಕೋಡಿಕಲ್ , ವಿ.ಹಿಂ.ಪ ಗ್ರಾಮಾಂತರ ಪ್ರಖಂಡ ಅಧ್ಯಕ್ಷ ಶಿವಪ್ರಸಾದ್ ಕೊಣಾಜೆ, ತೊಕ್ಕೊಟ್ಟು ವಾಸುಕಿ ಬಜರಂಗದಳ-ವಿ.ಹಿಂ.ಪ ಶಾಖೆ ಸಂಚಾಲಕ ನಿಖಿಲ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಆಂಬ್ಯುಲೆನ್ಸ್ ಕೊಡುಗೆಯಾಗಿ ನೀಡಿದ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡ ಲಾಂಚುಲಾಲ್ ಅವರನ್ನು ಸನ್ಮಾನಿಸಲಾಯಿತು.
ವಿಹಿಂಪ ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಆಶಿಕ್ ಗೋಪಾಲಕೃಷ್ಣ ನಿರೂಪಿಸಿದರು. ವಿನಯ್ ತೊಕ್ಕೊಟ್ಟು ವಂದಿಸಿದರು.





