
ಉಳ್ಳಾಲ: ಪಂಚಾಯತ್ ನಿಂದ ಪೂರೈಕೆಯಾಗುವ ನೀರು ಸರಬರಾಜು ಒಂದು ವಾರದಿಂದ ಸ್ಥಗಿತಗೊಂಡ ಕಾರಣ ಉಳ್ಳಾಲ ತಾಲೂಕಿನ ಬೋಳಿಯಾರ್ ನ ಅಮೆಮಾರ್ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕಿದ್ದು, ಸದ್ಯ ಕೊಳಕು ನೀರನ್ನೇ ಬಳಕೆ ಮಾಡುವ ಅನಿವಾರ್ಯತೆ ಎದುರಾಗಿದೆ.
ಬೋಳಿಯಾರ್ ಗ್ರಾ.ಪಂ ವ್ಯಾಪ್ತಿಯ ಅಮೆಮಾರ್ ಭಾಗದ ಹಲವು ಮನೆಗಳು ಪಂಚಾಯತ್ ನೀರನ್ನೇ ನಂಬಿದ್ದು, ಬಾವಿ ಕೂಡ ಇಲ್ಲದ ಕಾರಣ ನೀರಿಗೆ ಸಮಸ್ಯೆ ಎದುರಾಗಿದೆ. ಸದ್ಯ ಒಂದು ವಾರದಿಂದ ನಳ್ಳಿ ನೀರು ಪೂರೈಕೆ ಸ್ಥಗಿತಗೊಂಡ ಕಾರಣ ಕುಡಿಯಲು ಹಾಗೂ ಜೀವನೋಪಾಯಕ್ಕಾಗಿ ನೀರಿಗೆ ಬರಗಾಲ ಎದುರಾಗಿದೆ. ಹೀಗಾಗಿ ಸ್ಥಳೀಯರಾದ ಯಶೋಧರ ಶೆಟ್ಟಿ ಎಂಬವರು ಪಂಚಾಯತ್ ಪಿಡಿಓಗೆ ದೂರು ನೀಡಿದ್ದು, ನೀರಿನ ಸಮಸ್ಯೆ ಬಗೆಹರಿಸುವಂತೆ ವಿನಂತಿಸಿಕೊಂಡಿದ್ದಾರೆ. ಸುತ್ತಮುತ್ತಲಿನ ಹಲವು ಮನೆಗಳಿಗೆ ನೀರು ಪೂರೈಕೆ ಆಗದೇ ಸಂಕಷ್ಟ ಎದುರಾಗಿದೆ. ಸದ್ಯ ಕೊಳಕು ನೀರು ಒಮ್ಮೊಮ್ಮೆ ಪೂರೈಕೆಯಾಗ್ತಿದ್ದು, ಕುಡಿಯಲು ಕೂಡ ಯೋಗ್ಯವಾಗಿಲ್ಲ. ಸ್ಥಳೀಯವಾಗಿ ಇರೋ ರಾಜಕೀಯದ ಕಾರಣದಿಂದಲೇ ನೀರು ಪೂರೈಕೆ ಸಮಸ್ಯೆ ಎದುರಾಗಿದೆ ಎಂಬ ಆರೋಪವಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಜನರೇ ಹೆಚ್ಚಿರೋ ಭಾಗಗಳಲ್ಲಿ ನೀರು ಪೂರೈಕೆ ಮಾಡದೇ ರಾಜಕೀಯ ಮಾಡಲಾಗ್ತಿದೆ ಎಂದು ದೂರಲಾಗಿದೆ. ಈ ಬಗ್ಗೆ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಸದ್ಯ ನೀರಿನ ಸಮಸ್ಯೆ ಉಲ್ಬಣಿಸಿದೆ.

