ತೊಕ್ಕೊಟ್ಟು : ಪಜೀರು ಅಕ್ರಮ ಕಲ್ಲು ಕ್ವಾರೆಯಿಂದಾಗಿ ಸ್ಥಳೀಯ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ನೀರಿನ ಒರತೆ ಕಡಿಮೆಯಾಗಿ, ಕೃಷಿಕರು ವಲಸೆ ಹೋಗುವ ಸ್ಥಿತಿ ನಿರ್ಮಾಣಗೊಂಡಿದ್ದು, ಸಾರ್ವಜನಿಕರು ನಡೆದಾಡದಂತಹ ಸ್ಥಿತಿಯನ್ನು ನಿರ್ಮಿಸಿದ ಕ್ವಾರೆ ಎಲ್ಲಾ ಅನುಮತಿಗಳನ್ನು ಸ್ಥಳ ಪರಿಶೀಲನೆ ನಡೆಸಿ ರದ್ದುಗೊಳಿಸಬೇಕು ಹಾಗೂ ಈವರೆಗೆ ಸಾಗಾಟ ನಡೆಸಿದ ರಾಜಸ್ವವನ್ನು ಇಲಾಖೆ ವಸೂಲಿ ಮಾಡಬೇಕು ಎಂದು ಕ್ವಾರೆ ಸಂತ್ರಸ್ತರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ದೂರು ಸಲ್ಲಿಸಿದೆ.
ಉಳ್ಳಾಲ ತಾಲೂಕು ಪಜೀರು ಗ್ರಾಮದ ನಾಗಬನ ಎಂಬಲ್ಲಿ ಸರ್ವೆ ನಂಬರ್ 139/C ರಲ್ಲಿ ಪಜೀರು ಗ್ರಾಮ ಪಂಚಾಯಿತಿ ಹಾಲಿ ಸದಸ್ಯ ಭರತ್ ಶೆಟ್ಟಿ ಯಾನೆ ಬಂಟಪ್ಪ ಶೆಟ್ಟಿ ಎಂಬವರು ಕಾನೂನು ಬಾಹಿರವಾಗಿ ಪರಿಸರ, ಸಾರ್ವಜನಿಕರ, ಜಾನುವಾರುಗಳ ಪ್ರಾಣಕ್ಕೆ ಮತ್ತು ಸ್ಥಳೀಯ ಮನೆಗಳ, ಹಟ್ಟಿ, ಕೊಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಅಪಾಯಕಾರಿಯಾಗಿ ಕಲ್ಲು ಕ್ವಾರಿ ಗಣಿಗಾರಿಕೆಯನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
ನಿಯಮ ಮೀರಿ ಬಹಳಷ್ಟು ಆಳವಾಗಿ ಮತ್ತು ನಿಗದಿತ ವ್ಯಾಪ್ತಿ ಮೀರಿ ಗಣಿಗಾರಿಕೆ ನಡೆಸಿ ಅಪಾರವಾದ ಪ್ರಾಕೃತಿಕ ಸಂಪತ್ತು ಕೊಳ್ಳೆ ಹೊಡೆದಿದ್ದಾರೆ. ಇದರಿಂದ ಪರಿಸರದಲ್ಲಿನ ನಾಗಬನ, ಧಾರ್ಮಿಕ ನಂಬಿಕೆಯ ಸ್ಥಳಗಳಿಗೆ ಗೇಲ್ ಗ್ಯಾಸ್ ಪೈಪ್ ಲೈನ್ ಗೂ ಅಪಾಯ ಉಂಟಾಗಿದೆ. ನಿತ್ಯ ಇದೇ ರಸ್ತೆಗಳಲ್ಲಿ ನೂರಾರು ಜನ ವಾಹನಗಳು, ಶಾಲೆ, ಕಾಲೇಜು, ಉದ್ಯೋಗ ವ್ಯವಹಾರಗಳ ನಿಮಿತ್ತವೂ ಸಂಚಾರ ಮಾಡುತ್ತಿರುತ್ತಾರೆ.
ನಿರಂತರ ಕಲ್ಲು ಗಣಿಗಾರಿಕೆಯಿಂದಾಗಿ ಭೂಮಿಯ ನಿರಂತರ ಅದುರುವಿಕೆಯಿಂದ ಮನೆಗಳು, ಕಟ್ಟಡಗಳು ಎಲ್ಲವೂ ಬಿರುಕು ಬಿಟ್ಟಿವೆ. ಸಾರ್ವಜನಿಕರು ¥ ಹಾನಿಗೊಳಗಾದ ಮನೆಗಳನ್ನು ದುರಸ್ತಿಗೊಳಿಸಲಾಗದ ಸ್ಥಿತಿಯಲ್ಲಿದ್ದು, ಪ್ರತಿ ಕ್ಷಣವನ್ನು ಜೀವ ಕೈಯಲ್ಲಿಟ್ಟುಕೊಂಡು ಭಯದಿಂದ ಕಾಲ ಕಳೆಯಬೇಕಿದೆ.
ಕೃಷಿ ಜಮೀನುಗಳಿಗೂ ನೀರಾವರಿ ಆಶ್ರಯದ ತೋಡು, ಬಾವಿ, ಕೆರೆ ನೀರು ಒರತೆಗಳು ಬತ್ತಿ ತೋಟಗಳು ಒಣಗಿವೆ. ಕೃಷಿಕರು ನೀರಿನ ಕೊರತೆಯಿಂದ ವಲಸೆ ಹೋಗುವ ಪರಿಸ್ಥಿತಿಯೂ ನಿರ್ಮಾಣಗೊಂಡಿದೆ. ಪರಿಸರದ ಬಡ ದುರ್ಬಲ, ಅಮಾಯಕ ನಿವಾಸಿಗಳ ವಿರುದ್ಧ ನಿರಂತರ ದಬ್ಬಾಳಿಕೆ, ಹಣ ಬಲದಿಂದ ಭಯ ಹುಟ್ಟಿಸಿ ಅಧಿಕಾರಿಗಳನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪರಿಸರವನ್ನು ಸರ್ವೆ ನಡೆಸದೆ, ಸ್ಥಳೀಯರಿಗೆ ನೋಟೀಸು ಸಹ ನೀಡದೆ ಗಣಿಗಾರಿಕೆ ಗುತ್ತಿಗೆ , ಪರವಾನಿಗೆಯನ್ನು ಇಲಾಖೆ ನೀಡಿದೆ. ತಕ್ಷಣವೇ ಪರಿಸರವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪರಿಶೀಲನೆ ನಡೆಸಿ ನೀಡಿರುವ ಎಲ್ಲಾ ರೀತಿಯ ಅನುಮತಿಗಳನ್ನು ರದ್ದುಗೊಳಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸರಕಾರಿ ವೆಬ್ ಸೈಟ್ ನಲ್ಲಿ ಉಳ್ಳಾಲ ತಾಲ್ಲೂಕು ಫಜೀರು ಗ್ರಾಮದಲ್ಲಿ ಯಾವುದೇ ಕಪ್ಪು ಕಲ್ಲಿನ ಕೋರೆ ಬಗ್ಗೆ ಉಲ್ಲೇಖ ಇಲ್ಲ. ಆದರೂ ಅಕ್ರಮವಾಗಿ ಬ್ರಹತ್ ಕೋರೆಗಳು ಕಾರ್ಯ ನಿರ್ವಹಿಸುತಿರುವುದು ಹಾಸ್ಯಾಸ್ಪದವಾಗಿದೆ ಅನ್ನುವ ಆರೋಪವನ್ನು ಮಾಡಿದ್ದಾರೆ.



