

ಕುತ್ತಾರು: ಬಸ್ಸಿನಲ್ಲಿ ಕುಸಿದುಬಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಮರ್ಸಿ ಬಸ್ ನ ಚಾಲಕ ಸವಾದ್ ಮತ್ತು ನಿರ್ವಾಹಕ ಯಾಕೂಬ್ ಅವರನ್ನು ಕುತ್ತಾರು ದ ಜ್ಯೂಸ್ ಸಂಸ್ಥೆಯಲ್ಲಿ ಮಹಿಳೆಯ ಸಂಬಂಧಿಕರು ಸನ್ಮಾನಿಸಿದರು.
ತೊಕ್ಕೊಟ್ಟು ನಿವಾಸಿ ರೇವತಿ ಎಂಬವರು ಬಾಕ್ರಬೈಲ್ ನ ತರವಾಡು ಮನೆಯಲ್ಲಿ ನಡೆದಿದ್ದ ಪೂಜೆಗೆ ತೆರಳಿದ್ದರು. ಅಲ್ಲಿಂದ ಮತ್ತೆ ತೊಕ್ಕೊಟ್ಟು ಕಡೆಗೆ ವಾಪಸ್ಸಾಗುವ ಸಂದರ್ಭ ವಿಟ್ಲದಿಂದ ಮಂಗಳೂರು ಬರುತ್ತಿದ್ದ ಮರ್ಸಿ ಟ್ರಾವೆಲ್ಸ್ ಬಸ್ಸನ್ನೇರಿದ್ದಾರೆ. ಬಸ್ ಮುಡಿಪು ತಲುಪುತ್ತಿದ್ದಂತೆ ರೇವತಿ ಪ್ರಜ್ಞೆತಪ್ಪಿ ಬಸ್ಸಿನ ಸೀಟಿನಲ್ಲಿ ಅಸ್ವಸ್ಥಳಾಗಿ ಬಿದ್ದಿದ್ದಾರೆ. ತಕ್ಷಣ ತಡಮಾಡದ ಚಾಲಕ ಸವಾದ್, ನಿರ್ವಾಹಕ ಯಾಕೂಬ್ ಜತೆಗೂಡಿ ನೇರ ನಾಟೆಕಲ್ ಆಸ್ಪತ್ರೆಗೆ ಕರೆತಂದು ಶುಶ್ರೂಷೆ ನೀಡಲು ಸಹಕರಿಸಿದ್ದಾರೆ. ಇಂದು ರೇವತಿ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದು, ಅವರನ್ನು ಕರೆದೊಯ್ಯಲು ಸಹೋದರ ನಿವೃತ್ತ ಯೋಧ ಭಾಸ್ಕರ್ ಶೆಟ್ಟಿ ಹಾಗೂ ಸಹೋದರ ಮಾವ ಬ್ಯಾಂಕ್‍ನ ನಿವೃತ್ತ ಉದ್ಯೋಗಿ ರಘುನಾಥ್ ಶೆಟ್ಟಿ ಎಂಬವರು ಬಂದಿದ್ದಾರೆ. ಇದೇ ಸಂದರ್ಭ ರೇವತಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಬಸ್ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಯೆನೆಪೋಯ ಆಸ್ಪತ್ರೆ ಸಮೀಪ ದ ಜ್ಯೂಸ್ ಸಂಸ್ಥೆಯ ಬಳಿ ಮಂಗಳೂರು ತೆರಳುತ್ತಿದ್ದ ಮರ್ಸಿ ಬಸ್ಸನ್ನು ನಿಲ್ಲಿಸಿ ಇಬ್ಬರೂ ಸಿಬ್ಬಂದಿಗೆ ಗೌರವ ಸಲ್ಲಿಸಿದರು.
ಬಳಿಕ ಮಾಧ್ಯಮದ ಜತೆಗೆ ಮಾತನಾಡಿದ ಭಾಸ್ಕರ್ ಶೆಟ್ಟಿ, ಅವರು ಸಹೋದರಿಯ ರಕ್ಷಣೆ ನಡೆಸಿದ ಬಸ್ ಸಿಬ್ಬಂದಿ ಮಾನವೀಯತೆಯ ಕಾರ್ಯ ಎಲ್ಲರಿಗೂ ಪ್ರೇರಣೆ. ಕುಟುಂಬದ ಎಲ್ಲರ ಪರವಾಗಿ ನಾವು ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ. ಕೇವಲ ಆಸ್ಪತ್ರೆಗೆ ದಾಖಲಿಸಿರುವುದು ಮಾತ್ರವಲ್ಲದೆ ಯೋಗಕ್ಷೇಮವನ್ನು ಸಿಬ್ಬಂದಿ ವಿಚಾರಿಸಿರುವುದು ಅತ್ಯಂತ ಸಂತಸ ಕೊಟ್ಟಿದೆ. ಇಂದು ಸಹೋದರಿ ರೇವತಿ ಗುಣಮುಖಳಾಗಿ ಬಿಡುಗಡೆಯಾಗುತ್ತಿದ್ದಾರೆ ಎಂದರು.
ಇದೇ ಸಂದರ್ಭ ಉದ್ಯಮಿ ಸಂದೀಪ್ ಜತೆಗಿದ್ದರು,



