ಉಳ್ಳಾಲ್ ನ್ಯೂಸ್ ನೆಟ್ ವರ್ಕ್
ಕೊಣಾಜೆ: ಕೈರಂಗಳ, ಪುಣ್ಯಕೋಟಿನಗರದ ಶಾರದಾ ಗಣಪತಿ ವಿದ್ಯಾಕೇಂದ್ರದಲ್ಲಿ, ಸಾರ್ಥಕ ಬದುಕಿನ ಯಾತ್ರೆ ಮುಗಿಸಿದ ಮಹಾನ್ ಚೇತನ ಮಾಜಿ ರಾಷ್ಟ್ರಪತಿ ಭಾರತರತ್ನ ಡಾ|ಎ.ಪಿ.ಜೆ.ಅಬ್ದುಲ್ಕಲಾಂ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಸ್ಥೆಯ ಮಾರ್ಗದರ್ಶಕರಾದ ಪಿ.ಶಂಕರಭಟ್ ಕಲಾಂ ಅವರ ಜೀವನ ಸಾಧನೆ ಕುರಿತಾಗಿ ನುಡಿನಮನ ಸಲ್ಲಿಸಿ, ಎರಡು ದಶಕಗಳ ಹಿಂದೆ ಶ್ರೀಹರಿಕೋಟದ ಉಪಗ್ರಹ ಉಡ್ಡಯನ ಕ್ಷೇತ್ರದಲ್ಲಿ ಕಲಾಂ ಅವರ ಜೊತೆಯಾಗಿ ಕೆಲಸ ನಿರ್ವಹಿಸಿದ ಸಂದರ್ಭವನ್ನು ಸ್ಮರಿಸಿಕೊಂಡರು ಮತ್ತು ಅವರ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದರು.
ಈ ಸಂದರ್ಭ ಪ್ರಾಂಶುಪಾಲರಾದ ಪ್ರವೀಣ್ ಕುಮಾರ್.ಎನ್, ಪ್ರೌಢಶಾಲಾ ಮುಖ್ಯಶಿಕ್ಷಕಿ ಕುಮಾರಿ ಯೋಗಿತಾ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಕುಮಾರಿ ಸಂಧ್ಯಾ ಹಾಗೂ ಮೂರೂ ವಿಭಾಗಗಳ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳೊಡನೆ ಕಲಾಂ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಅರ್ಪಿಸಿ ಗೌರವಿಸಿದರು.
ಕಲಾಂ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನವಾಗಿ ಸಾಮೂಹಿಕ ಪ್ರಾರ್ಥನೆ ಗೈಯಲಾಯಿತು.




